ಆರು ಜಿಲ್ಲೆಗಳ 25.78 ಲಕ್ಷ ಮತದಾರರು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮಾಜಿ ಸ್ಪೀಕರ್ ಮುಬಾರಕ್ ಗುಲ್, ಜಮ್ಮು–ಕಾಶ್ಮೀರ ಕಾಂಗ್ರೆಸ್ ಘಟಕದ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಸೇರಿದಂತೆ 239 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಪಿಡಿಪಿಯ ಮಾಜಿ ಸಚಿವರಾದ ಆಸಿಯಾ ನಕಾಶ್, ಗುಲಾಂ ನಬಿ ಹಂಜೂರಾ, ಜೈಲಿನಲ್ಲಿರುವ ಪ್ರತ್ಯೇಕ ತಾವಾದಿ ನಾಯಕ ಸರ್ಜನ್ ಅಹ್ಮದ್ ವಾಗೇ, ಅಪ್ನಿ ಪಕ್ಷದ ಅಧ್ಯಕ್ಷ ಅಲ್ತಾಫ್ ಬುಖಾರಿ, ಮಾಜಿ ಸಚಿವರಾದ ಅಲಿ ಮೊಹಮ್ಮದ್ ಸಾಗರ್ ಸಹ ಚುನಾವಣಾ ಅಖಾಡದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
ನಗರ ಪ್ರದೇಶದಲ್ಲಿ 1,056 ಹಾಗೂ ಗ್ರಾಮೀಣ ಪ್ರದೇಶದಲ್ಲಿ 2,446 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪಾರದರ್ಶಕತೆಯ ಖಚಿತತೆಗಾಗಿ ಎಲ್ಲ ಮತಗಟ್ಟೆಗಳು ವೆಬ್‌ಕಾಸ್ಟಿಂಗ್ ಸೌಲಭ್ಯ ಹೊಂದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭದ್ರತೆಯ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಿ ವಾಹನಗಳ ಮೇಲೆ ಕಣ್ಗಾವಲಿಡಲಾಗಿದೆ.
ಸೆ. 18ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ 61.38ರಷ್ಟು ಮತದಾನವಾಗಿತ್ತು. ಮೂರನೇ ಹಂತದ ಮತದಾನವು ಅಕ್ಟೋಬರ್ 1ರಂದು ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಅರ್ಹ ಮತದಾರರು ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಲು ತಮ್ಮ ಪಾತ್ರವನ್ನು ನಿಭಾಯಿಸಬೇಕು ಎಂದು ಕರೆ ಮಾಡಿದ್ದಾರೆ.
ಭಯೋತ್ಪಾದನೆ ಮುಕ್ತ, ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರದ ನಿರ್ಮಾಣಕ್ಕೆ ಗರಿಷ್ಠ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಬದಲಾವಣೆಯ ಹೊಸ್ತಿಲಲ್ಲಿದೆ. ಇಂದು 26 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಜಮ್ಮು-ಕಾಶ್ಮೀರದ ಜನರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬರುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಮನವಿ ಮಾಡಿದ್ದಾರೆ
'ಜಮ್ಮು ಮತ್ತು ಕಾಶ್ಮೀರದ ನನ್ನ ಸಹೋದರ, ಸಹೋದರಿಯರೇ, ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಗರಿಷ್ಠ ಸಂಖ್ಯೆಯಲ್ಲಿ ಮತಗಟ್ಟೆಗೆ ತೆರಳಿ ನಿಮ್ಮ ಹಕ್ಕುಗಳಿಗಾಗಿ, 'ಇಂಡಿಯಾ'ಗಾಗಿ ಮತ ಚಲಾಯಿಸಿ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
'ರಾಜ್ಯದ ಸ್ಥಾನಮಾನವನ್ನು ಕಸಿದುಕೊಳ್ಳುವ ಮೂಲಕ ಜಮ್ಮು ಜನರನ್ನು ಬಿಜೆಪಿ ಅವಮಾನ ಮಾಡಿದ್ದು, ಸಾಂವಿಧಾನಿಕ ಹಕ್ಕುಗಳೊಂದಿಗೆ ಆಟವಾಡಿದೆ' ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
'ಇಂಡಿಯಾ'ಕ್ಕೆ ನೀಡುವ ಪ್ರತಿಯೊಂದು ಮತವು ಬಿಜೆಪಿ ಸೃಷ್ಟಿಸಿರುವ ಅನ್ಯಾಯದ ಚಕ್ರವ್ಯೂಹವನ್ನು ಭೇದಿಸಿ ಜಮ್ಮು ಮತ್ತು ಕಾಶ್ಮೀರವನ್ನು ಸಮೃದ್ಧಿಯ ಹಾದಿಯತ್ತ ಕೊಂಡೊಯ್ಯಲಿದೆ' ಎಂದು ಅವರು ಭರವಸೆ ನೀಡಿದ್ದಾರೆ.
ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಜಮ್ಮು-ಕಾಶ್ಮೀರದಲ್ಲಿ ಎರಡನೇ ಹಂತದಲ್ಲಿ ಬೆಳಿಗ್ಗೆ 11ರ ಹೊತ್ತಿಗೆ ಶೇ 24.10ರಷ್ಟು ಮತದಾನವಾಗಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಲು ಅಮೆರಿಕ, ನಾರ್ವೆ ಮತ್ತು ಸಿಂಗಪುರ ಸೇರಿದಂತೆ 16 ರಾಷ್ಟ್ರಗಳ ರಾಜತಾಂತ್ರಿಕರ ನಿಯೋಗ ಇಂದು ಭೇಟಿ ನೀಡಿದೆ. ಕಣಿವೆ ರಾಜ್ಯಕ್ಕೆ ಆಗಮಿಸಿದ ಈ ನಿಯೋಗವು ಬುಡ್ಗಾಂ ಜಿಲ್ಲೆಯ ಓಂಪೋರಾ ಪ್ರದೇಶದ ಮತಗಟ್ಟೆಗೆ ಭೇಟಿ ಕೊಟ್ಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಕೇಂದ್ರ ಸರ್ಕಾರದ ಈ ನೀತಿಯನ್ನು ಖಂಡಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, 'ಚುನಾವಣೆ ದೇಶದ ಆಂತರಿಕ ವಿಷಯವಾಗಿದೆ. ವಿದೇಶಿಗರ ಮಾನ್ಯತೆ ನಮಗೆ ಏಕೆ ಬೇಕು' ಎಂದು ಪ್ರಶ್ನಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ 26 ಕ್ಷೇತ್ರಗಳಿಗೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಚುನಾವಣಾ ಆಯೋಗದ ಪ್ರಕಾರ, ಮಧ್ಯಾಹ್ನ 1ಗಂಟೆಯವರೆಗೆ ಶೇ 36.93ರಷ್ಟು ಮತದಾನವಾಗಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ 26 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯುತ್ತಿದೆ. ಚುನಾವಣಾ ಆಯೋಗದ ಪ್ರಕಾರ, ಮಧ್ಯಾಹ್ನ 3ಗಂಟೆಯವರೆಗೆ ಶೇ 46.12ರಷ್ಟು ಮತದಾನವಾಗಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ 26 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಮುಕ್ತಾಯವಾಗಿದೆ. ಮತದಾನ ಬಹುತೇಕ ಶಾಂತಿಯುತವಾಗಿ ನಡೆಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.