ಜಮ್ಮು: ಇಸ್ರೇಲ್–ಹಮಾಸ್–ಹಿಜ್ಬುಲ್ಲಾ ಸಂಘರ್ಷದಿಂದ ಮೃತಪಟ್ಟವರ ಗೌರವಾರ್ಥವಾಗಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಚುನಾವಣಾ ಪ್ರಚಾರ ಸಮಾವೇಶ ರದ್ದು ಮಾಡಿರುವುದನ್ನು ಬಿಜೆಪಿ ನಾಯಕ ಕವೀಂದರ್ ಗುಪ್ತಾ ಪ್ರಶ್ನಿಸಿದ್ದಾರೆ.
ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಮೃತಪಟ್ಟರೆ ಮುಫ್ತಿಗೆ ನೋವಾಗುವುದೇಕೆ ಎಂದು ಕೇಳಿದ್ದಾರೆ.
'ಲೆಬನಾನ್ ಮತ್ತು ಗಾಜಾದಲ್ಲಿ ಮೃತಪಟ್ಟವರಿಗೆ, ಅದರಲ್ಲೂ ಮುಖ್ಯವಾಗಿ ಹಸನ್ ನಸ್ರಲ್ಲಾ ಅವರಿಗೆ ಗೌರವ ಸೂಚಿಸಲು ಚುನಾವಣಾ ಪ್ರಚಾರ ಸಮಾವೇಶ ರದ್ದು ಮಾಡುತ್ತಿದ್ದೇನೆ. ಇಂತಹ ದುಃಖದ ಸಂದರ್ಭದಲ್ಲಿ ನಾವು ಪ್ಯಾಲೆಸ್ಟೀನ್ ಮತ್ತು ಲೆಬನಾನ್ ಜೊತೆ ನಿಲ್ಲಲಿದ್ದೇವೆ' ಎಂದು ಮುಫ್ತಿ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಗುಪ್ತಾ, 'ಸಯ್ಯದ್ ಹಸನ್ ನಸ್ರಲ್ಲಾ ಸಾವು ಮುಫ್ತಿಗೆ ನೋವುಂಟು ಮಾಡುತ್ತಿರುವುದೇಕೆ? ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಿ, ಹತ್ಯೆ ಮಾಡಿದಾಗ ಮುಫ್ತಿ ತುಟಿ ಬಿಗಿದುಕೊಂಡಿದ್ದರು. ಇವೆಲ್ಲ ಮೊಸಳೆ ಕಣ್ಣೀರು ಮತ್ತು ಈ ನಡೆಯ ಹಿಂದಿನ ಉದ್ದೇಶ ಜನರಿಗೆ ಅರ್ಥವಾಗಿದೆ' ಎಂದಿರುವುದಾಗಿ 'ಎಎನ್ಐ' ವರದಿ ಮಾಡಿದೆ.
ಬೈರೂತ್ ಮೇಲೆ ಶುಕ್ರವಾರ ದಾಳಿ ನಡೆಸಿದ್ದ ಇಸ್ರೇಲ್, ನಸ್ರಲ್ಲಾ ಅವರನ್ನು ಹತ್ಯೆ ಮಾಡಿರುವುದಾಗಿ ಶನಿವಾರ ಘೋಷಿಸಿತ್ತು. ಇದರ ಬೆನ್ನಲ್ಲೇ ಶ್ರೀನಗರದ ಹಲವೆಡೆ ಇಸ್ರೇಲ್ ವಿರೋಧಿ ಪ್ರತಿಭಟನೆಗಳು ನಡೆದಿದ್ದವು.
ಹಸನಾಬಾದ್, ರೈನಾವರಿ, ಸೈದಾಕದಲ್, ಮೀರ್ ಬಿಹ್ರಿ ಮತ್ತು ಅಶಾಯ್‌ಭಾಗ್‌ನಲ್ಲಿ ಕಪ್ಪು ಬಾವುಟ ಹಿಡಿದು ಬೀದಿಗಿಳಿದಿದ್ದ ಸಾಕಷ್ಟು ಜನರು, ಇಸ್ರೇಲ್ ಮತ್ತು ಅಮೆರಿಕ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.