ADVERTISEMENT

Jammu & Kashmir Assembly Polls: ಮೊದಲ ಹಂತದ 24ಕ್ಷೇತ್ರಗಳಲ್ಲಿ ಮತದಾನ ಬಿರುಸು

ಪಿಟಿಐ
Published 18 ಸೆಪ್ಟೆಂಬರ್ 2024, 4:27 IST
Last Updated 18 ಸೆಪ್ಟೆಂಬರ್ 2024, 4:27 IST
<div class="paragraphs"><p>ಮತದಾನ</p></div>

ಮತದಾನ

   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಬುಧವಾರ ಬೆಳಗ್ಗೆ 7 ಗಂಟೆಯಿಂದ ಮೊದಲ ಹಂತದಲ್ಲಿ 24 ಕ್ಷೇತ್ರಗಳಲ್ಲಿ ಮತದಾನ ಬಿರುಸುಗೊಂಡಿದೆ.

ಅಲ್ಲಲ್ಲಿ ಸಣ್ಣಪುಟ ಗಲಾಟೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ ಎಮದು ಚುನಾವಣೆ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಮೊದಲ ಹಂತದಲ್ಲಿ 64 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 7.14 ಲಕ್ಷಕ್ಕೂ ಹೆಚ್ಚು ಮತದಾರರು ಮತದಾನ ಮಾಡಲಿದ್ದಾರೆ.

ಭಾರೀ ಭದ್ರತೆಯ ನಡುವೆ ಚಿನಾಬ್ ಕಣಿವೆ ಜಿಲ್ಲೆಗಳಾದ ದೋಡಾ, ಕಿಸ್ತ್ವಾರ, ರಾಂಬನ್, ಅನಂತನಾಗ್‌, ಪುಲ್ವಾಮಾ, ಕುಲ್ಗಾಮ್ ಮತ್ತು ಶೋಪಿಯಾನ್ ಕ್ಷೇತ್ರಗಳಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.  

ಏತನ್ಮಧ್ಯೆ, ಮೊದಲ ಹಂತದಲ್ಲಿ 35,000ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂದು ದಶಕದ ಅವಧಿಯಲ್ಲಿ ಇಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದು ಇದೇ ಮೊದಲು. ಕಣಿವೆ ರಾಜ್ಯಕ್ಕೆ ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನ ವನ್ನು ಕೇಂದ್ರ ಸರ್ಕಾರವು 2019ರ ಆಗಸ್ಟ್‌ನಲ್ಲಿ ಹಿಂಪಡೆದು, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದು.

ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ಕೊಡಿಸುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್ ಪಕ್ಷವು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದು, ಮುಂದೆ ಇಲ್ಲಿ ಸರ್ಕಾರ ರಚಿಸಲು ಈ ಮೈತ್ರಿಕೂಟವು ಪ್ರಬಲ ಪೈಪೋಟಿ ನೀಡುತ್ತಿದೆ.

ಜಮ್ಮು ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಉದ್ದೇಶಿಸಿದೆ. 2014ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಈ ಭಾಗದ 37 ಸ್ಥಾನಗಳ ಪೈಕಿ 25 ಸ್ಥಾನಗಳಲ್ಲಿ ಗೆದ್ದಿತ್ತು. ಬಹುಮತ ಪಡೆಯಲು ಬಿಜೆಪಿಯು ಸಣ್ಣ ಪಕ್ಷಗಳಾದ ಪೀಪಲ್ಸ್ ಕಾನ್ಫರೆನ್ಸ್, ಅಪ್ನಿ ‍ಪಾರ್ಟಿಯನ್ನು ನೆಚ್ಚಿಕೊಳ್ಳಬೇಕಾಗಬಹುದು.

ಎರಡನೆಯ ಹಾಗೂ ಮೂರನೆಯ ಹಂತದ ಮತದಾನವು ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಂದು ನಡೆಯಲಿದೆ. ಮತ ಎಣಿಕೆಯು ಅಕ್ಟೋಬರ್ 8ಕ್ಕೆ ನಿಗದಿಯಾಗಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.