ಶ್ರೀನಗರ: ಪಾಕ್ ಭಯೋತ್ಪಾದಕ ಬಾಬಾ ಹಮಾಸ್ ನೇತೃತ್ವದ ‘ತೆಹ್ರೀಕ್ ಲಬೈಕ್ ಯಾ ಮುಸ್ಲಿಂ’ ಸಂಘಟನೆಗೆ ನೇಮಕಾತಿ ನಡೆಯುತ್ತಿರುವ ಶಂಕೆಯ ಮೇರೆಗೆ ಜಮ್ಮು ಮತ್ತು ಕಾಶ್ಮೀರದ ಹಲವಡೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕ ನಿಗ್ರಹ ಗುಪ್ತಚರ ಘಟಕವು ಶ್ರೀನಗರ, ಗಂದರ್‌ಬಲ್, ಬಂಡಿಪೋರಾ, ಕುಲ್ಗಾಮ್, ಬುದ್ಗಾಮ್, ಅನಂತನಾಗ್ ಮತ್ತು ಪುಲ್ವಾಮಾ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ದಾಳಿ ನಡೆಸಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
‘ತೆಹ್ರೀಕ್ ಲಬೈಕ್ ಯಾ ಮುಸ್ಲಿಂ’ ಗುಂಪನ್ನು ‘ಲಷ್ಕರ್-ಎ-ತಯಬಾ’ (ಎಲ್‌ಇಟಿ) ಸಂಘಟನೆಯ ಭಾಗವೆಂದೇ ಪರಿಗಣಿಸಲಾಗಿದೆ. ಇವುಗಳನ್ನು ಖುದ್ದು ಬಾಬಾ ಹಮಾಸ್ ನಿರ್ವಹಿಸುತ್ತಿದ್ದಾನೆ ಎಂದು ಹೇಳಲಾಗಿದೆ.
ಕಾಶ್ಮೀರದ ಗಾಂದರ್‌ಬಲ್ ಜಿಲ್ಲೆಯ ಗಗನ್‌ಗೀರ್‌ನಲ್ಲಿ ಭಾನುವಾರ ಉಗ್ರರು ನಡೆಸಿದ ದಾಳಿಯಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಹಿರಿಯ ಅಧಿಕಾರಿಗಳನ್ನು ಒಳಗೊಂಡ ನಾಲ್ವರು ಸದಸ್ಯರು ಮತ್ತು ವಿಧಿವಿಜ್ಞಾನ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿದೆ.
‘ಜಿಲ್ಲೆಯ ಗುಂಡ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಇಬ್ಬರು ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ದೊಡ್ಡ ಪ್ರಮಾಣದಲ್ಲಿ ಜೀವ ಹಾನಿಗೊಳಿಸುವ ಯೋಜನೆ ರೂಪಿಸಿದ್ದರು. ದಾಳಿಗೂ ಮುನ್ನ ಸಾಕಷ್ಟು ಪೂರ್ವ ತಯಾರಿ ನಡೆಸಿದಂತೆ ಕಂಡುಬರುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.