ADVERTISEMENT

ಜಮ್ಮು–ಕಾಶ್ಮೀರ: ಒಂದು ವರ್ಷದಲ್ಲಿ ಸಿಆರ್‌ಪಿಎಫ್‌ನಿಂದ 175 ಉಗ್ರರ ಹತ್ಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2022, 10:10 IST
Last Updated 17 ಮಾರ್ಚ್ 2022, 10:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ ಮಾರ್ಚ್‌ 1ರಿಂದ 2022ರ ಮಾರ್ಚ್‌ 16ರ ವರೆಗೂ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯು (ಸಿಆರ್‌ಪಿಎಫ್‌) 175 ಮಂದಿ ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಇದೇ ಅವಧಿಯಲ್ಲಿ 183 ಉಗ್ರರನ್ನು ಬಂಧಿಸಿರುವುದಾಗಿ ಸಿಆರ್‌ಪಿಎಫ್‌ನ ಮಹಾನಿರ್ದೇಶಕ ಕುಲ್‌ದೀಪ್‌ ಸಿಂಗ್‌ ಹೇಳಿದ್ದಾರೆ.

ಎಡ ಪಂಥೀಯ ತೀವ್ರವಾದಿಗಳ ಪ್ರಭಾವದಲ್ಲಿರುವ ರಾಜ್ಯಗಳಲ್ಲಿ ನಡೆಸಿರುವ ಹಲವು ಕಾರ್ಯಾಚರಣೆಗಳಲ್ಲಿ 19 ಮಾವೋವಾದಿಗಳ ಹತ್ಯೆ ಮಾಡಲಾಗಿದೆ ಹಾಗೂ 699 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಮ್ಮುವಿನ ಎಂಎ ಕ್ರೀಡಾಂಗಣದಲ್ಲಿ ಶನಿವಾರ ಸಿಆರ್‌ಪಿಎಫ್‌ 83ನೇ ಸ್ಥಾಪನಾ ದಿನದಪರೇಡ್‌ ನಡೆಸಲಿದೆ. ಇದೇ ಮೊದಲ ಬಾರಿಗೆ ದೆಹಲಿಯ ಹೊರ ಭಾಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ADVERTISEMENT

'ಭದ್ರತಾ ಪಡೆಗಳು ದೇಶದ ಬೇರೆ ಬೇರೆ ಭಾಗಗಳಲ್ಲಿ ವಾರ್ಷಿಕ ಪರೇಡ್ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರ ಮುಂದೆ ನಮ್ಮ ಪಡೆಗಳ ಸಾಮರ್ಥ್ಯ ಅನಾವರಣಗೊಳಿಸುವಂತೆ ಕೇಂದ್ರ ಸರ್ಕಾರವು ಸೂಚಿಸಿದೆ. ಯುವ ಜನತೆಗೆ ಇಂಥ ಕಾರ್ಯಕ್ರಮಗಳು ಸ್ಫೂರ್ತಿ ನೀಡಬಹುದಾಗಿರುತ್ತದೆ. ಇದರಿಂದ ರಾಷ್ಟ್ರೀಯ ಭಾವೈಕ್ಯತೆಗೂ ಪೂರಕವಾಗಲಿದೆ..' ಎಂದು ಕುಲ್‌ದೀಪ್‌ ಸಿಂಗ್‌ ಹೇಳಿದ್ದಾರೆ.

ದೇಶದಲ್ಲಿ 117 ಜನರಿಗೆ ಸಿಆರ್‌ಪಿಎಫ್‌ ವಿಶೇಷ ಭದ್ರತೆ ಒದಗಿಸುತ್ತಿದೆ. ವಿಐಪಿ ಭದ್ರತಾ ಘಟಕಕ್ಕೆ 32 ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇತ್ತೀಚೆಗೆ ಮುಕ್ತಾಯವಾದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಒಟ್ಟು 41 ವಿಐಪಿಗಳಿಗೆ ಸಿಆರ್‌ಪಿಎಫ್‌ ಭದ್ರತೆ ನೀಡಿತ್ತು. ಚುನಾವಣೆಯ ಬಳಿಕ 27 ಜನರಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್‌ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಂವಿಧಾನದ 370ನೇ ವಿಧಿ ರದ್ಧತಿಯ ನಂತರದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟದಂತಹ ಘಟನೆಗಳು ಬಹುತೇಕ ನಿಂತಿವೆ. ವಿದೇಶದಿಂದ ಉಗ್ರರ ನುಸುಳುವಿಕೆ ಮತ್ತು ದಾಳಿಯ ಘಟನೆಗಳೂ ಕಡಿಮೆಯಾಗಿವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.