ಗಂದೆರ್‌ಬಾಲ್ (ಜಮ್ಮು ಮತ್ತು ಕಾಶ್ಮೀರ): ಪಿಡಿಪಿ ಪಕ್ಷವು ತಮ್ಮ ಪಕ್ಷದ ಪ್ರಣಾಳಿಕೆಯನ್ನು ನಕಲು ಮಾಡಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ. ಅಲ್ಲದೆ ನಮ್ಮೆಲ್ಲಾ ಅಜೆಂಡಾ ಒಂದೇ ಆಗಿರುವುದರಿಂದ ನ್ಯಾಷನಲ್ ಕಾನ್ಫರೆನ್ಸ್– ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ವಿರುದ್ಧ ನಿಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಡಿ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿಯವರಲ್ಲಿ ಮನವಿ ಮಾಡಿದ್ದಾರೆ.
ತಮ್ಮ ಪಕ್ಷದ ಅಜೆಂಡಾಗಳನ್ನು ಒಪ್ಪಿದರೆ ಎಲ್ಲಾ ಕ್ಷೇತ್ರಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಡಲು ಸಿದ್ಧ ಎಂದು ಮೆಹಬೂಬಾ ಮುಫ್ತಿ ಹೇಳಿದ ಮರುದಿನವೇ ಒಮರ್ ಅವರು ಈ ರೀತಿ ಮನವಿ ಮಾಡಿದ್ದಾರೆ.
ಕೇಂದ್ರ ಕಾಶ್ಮೀರದ ಗಂದೆರ್‌ಬಾಲ್ ಜಿಲ್ಲೆಯಲ್ಲಿ ನಡೆದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸಮಾವೇಶದಲ್ಲಿ ಅವರು ಮಾತನಾಡಿದರು.
‘ನಮ್ಮ ಪ್ರಣಾಳಿಕೆಯಲ್ಲಿ ಯಾವುದೂ ಉಳಿದಿಲ್ಲ. ಇವತ್ತು ನಮ್ಮ ಪ್ರಣಾಳಿಕೆಯನ್ನು ಎಲ್ಲರೂ ನಕಲು ಮಾಡಿದ್ದಾರೆ. ಅವರು ಬೇರೆಯದೇನಾದರೂ ಮಾಡಬಹುದಿತ್ತು’ ಎಂದು ಶನಿವಾರ ಬಿಡುಗಡೆಗೊಂಡ ಪಿಡಿಪಿಯ ಪ್ರಣಾಳಿಕೆಯನ್ನು ಉಲ್ಲೇಖಿಸಿ ಹೇಳಿದ್ದಾರೆ.
‘ಅಧಿಕಾರಕ್ಕೆ ಬಂದರೆ ನಾವು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಹೇಳಿದ್ದೆವು. ಪಿಡಿಪಿಯ ಪ್ರಣಾಳಿಕೆಯಲ್ಲೂ ಅದು ಇದೆ. ಮೊದಲ ವರ್ಷವೇ ಒಂದು ಲಕ್ಷ ಸರ್ಕಾರಿ ನೌಕರಿ ನೀಡುವುದಾಗಿ ಹೇಳಿದ್ದೆವು. ಅದನ್ನು ಕೂಡ ಅವರು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ’ ಎಂದರು.
ಎಲ್ಲಾ ಕ್ಷೇತ್ರಗಳನ್ನು ಬಿಟ್ಟುಕೊಡುವ ಪಿಡಿಪಿಯ ಪ್ರಸ್ತಾವನೆಗೆ ಉತ್ತರಿಸಿದ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನನ್ಸ್ ಹಾಗೂ ಪಿಡಿಪಿಯ ಅಜೆಂಡಾಗಳ ನಡುವೆ ಹೆಚ್ಚಿನ ವ್ಯತ್ಯಾಸವೇನಿಲ್ಲ ಎಂದರು.
‘ಅವರ ಅಜೆಂಡಾವನ್ನು ಒಪ್ಪಿಕೊಂಡರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಿದ್ದಾರೆ. ನಮ್ಮ ಅಜೆಂಡಾವನ್ನು ನಿಮ್ಮ ಪ್ರಣಾಳಿಕೆಯಲ್ಲಿ ಹಾಕಿದ್ದೀರಿ. ಹೀಗಾಗಿ ನಮ್ಮ ಅಜೆಂಡಾವನ್ನು ನೀವು ಈಗಾಗಲೇ ಒಪ್ಪಿಕೊಂಡಂತೆ. ನಮ್ಮಿಬ್ಬರ ಅಜೆಂಡಾಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಹೀಗಾಗಿ ನೀವು ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಡಿ. ನಾವು ಜಮ್ಮು ಮತ್ತು ಕಾಶ್ಮೀರಕ್ಕಾಗಿ ಉತ್ತಮ ನಾಳೆಗಳನ್ನು ಕಟ್ಟುತ್ತೇವೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.