ADVERTISEMENT

J&K ಫಲಿತಾಂಶ ಬಿಜೆಪಿಗೆ ಪಾಠ, ಕೇಂದ್ರ ಮೂಗು ತೂರಿಸುವುದು ನಿಲ್ಲಿಸಲಿ: ಮೆಹಬೂಬಾ

ಪಿಟಿಐ
Published 8 ಅಕ್ಟೋಬರ್ 2024, 11:42 IST
Last Updated 8 ಅಕ್ಟೋಬರ್ 2024, 11:42 IST
<div class="paragraphs"><p>ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ</p></div>

ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ

   

– ಪಿಟಿಐ ಚಿತ್ರ

ಶ್ರೀನಗರ: ವಿಧಾನಸಭೆ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ನೀಡಿದ ತೀರ್ಪಿನಿಂದ ಬಿಜೆಪಿ ಪಾಠ ಕಲಿತುಕೊಳ್ಳಬೇಕು, ಮುಂಬರುವ ನ್ಯಾಷನಲ್ ಕಾನ್ಫರೆನ್ಸ್–ಕಾಂಗ್ರೆಸ್ ಸರ್ಕಾರದಲ್ಲಿ ಮೂಗು ತೂರಿಸಬಾರದು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ADVERTISEMENT

ಚುನಾವಣೆಯಲ್ಲಿ ಗೆಲುವು ಸಾಧಿಸಿದ ನ್ಯಾಷನಲ್ ಕಾನ್ಫರೆನ್ಸ್ ನಾಯಕರಿಗೆ ಅಭಿನಂದನೆ ಸಲ್ಲಿಸಿದ ಅವರು, ತಮ್ಮ ಪಕ್ಷವು ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡಲಿದೆ ಎಂದಿದ್ದಾರೆ.

‘ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನ್ಯಾಷನಲ್ ಕಾನ್ಫರೆನ್ಸ್‌ನ ನಾಯಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅತಂತ್ರ ವಿಧಾನಸಭೆ ಫಲಿತಾಂಶ ನೀಡದ ಜಮ್ಮು ಮತ್ತು ಕಾಶ್ಮೀರದ ಜನತೆಗೂ ನಾನು ಅಭಿನಂದನೆ ತಿಳಿಸುತ್ತೇನೆ. ಯಾಕೆಂದರೆ ಅವರು 2019ರ ಆಗಸ್ಟ್ 5ರ ಬಳಿಕ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಅವರ ಸಮಸ್ಯೆಗಳ ಪರಿಹಾರಕ್ಕೆ ಸ್ಥಿರ ಮತ್ತು ಗಟ್ಟಿ ಸರ್ಕಾರದ ಅವಶ್ಯಕತೆ ಇದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.

ಸ್ಪಷ್ಟವಾದ ಫಲಿತಾಂಶ ಬರದೇ ಇದ್ದಿದ್ದರೆ, ಯಾವುದಾದರೂ ದುಸ್ಸಾಹಸ ನಡೆಯುತ್ತಿತ್ತು. ಈ ಫಲಿತಾಂಶದಿಂದ ಬಿಜೆಪಿ ಪಾಠ ಕಲಿಯಬೇಕು. ಸರ್ಕಾರದ ಆಗುಹೋಗುಗಳಲ್ಲಿ ಮೂಗು ತೂರಿಸಬಾರದು. ಒಂದು ವೇಳೆ ಹಾಗೆ ಮಾಡಿದರೆ ಅವರ ಪರಿಸ್ಥಿತಿ ಈಗಿನದ್ದಕ್ಕಿಂತ ಇನ್ನೂ ಕೆಡಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.