ಶ್ರೀನಗರ: ರಾಷ್ಟ್ರ ವಿರೋಧಿ ಮತ್ತು ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿರುವ ಆರೋಪದಡಿ ಕೆಲಸ ಕಳೆದುಕೊಂಡಿರುವ 11 ಮಂದಿಯ ಪೈಕಿ ಇಬ್ಬರು ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದಿನ್‌ನ ಮಕ್ಕಳಾಗಿದ್ದಾರೆ.
ಭಾರತೀಯ ಸಂವಿಧಾನದ ಆರ್ಟಿಕಲ್ 311(2) ಸಿ ಪ್ರಕಾರ 11 ಮಂದಿಯನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ.
ಸೈಯದ್ ಸಲಾಹುದಿನ್‌ನ ಪುತ್ರರಾದ ಶಕೀಲ್ ಯೂಸುಫ್ ಮತ್ತು ಶಾಹಿದ್ ಯೂಸುಫ್ ಶಾ ಸರ್ಕಾರಿ ಕೆಲಸದಿಂದ ವಜಾಗೊಂಡವರಲ್ಲಿ ಇಬ್ಬರಾಗಿದ್ದಾರೆ.
ಶ್ರೀನಗರದ ಸ್ಕಿಮ್ಸ್ ಆಸ್ಪತ್ರೆಯ ಲ್ಯಾಬ್‌ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಶಕೀಲ್ ಯೂಸುಫ್ ಮತ್ತು ಶೇರ್ ಇ ಕಾಶ್ಮೀರ್ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಭಾಗದ ಹೆಚ್ಚುವರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಹಿದ್ ಯೂಸುಫ್ ಶಾ ಸೇವೆಯಿಂದ ವಜಾಗೊಂಡಿದ್ದಾರೆ. ಇಬ್ಬರೂ ಭಾರತ ವಿರೋಧಿ ಚಟುವಟಿಕೆಗಳಿಗೆ ನಿಧಿ ಸಂಗ್ರಹ ಕಾರ್ಯದಲ್ಲಿ ಭಾಗಿಯಾದ ಆರೋಪವಿದೆ.
ಉಗ್ರರಿಗೆ ಸಹಾಯಧನ ಪ್ರಕರಣಗಳಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) 2017 ಮತ್ತು 2020ರಲ್ಲಿ ಕ್ರಮವಾಗಿ ಶಕೀಲ್ ಮತ್ತು ಶಾಹಿದ್‌ನನ್ನು ಬಂಧಿಸಿತ್ತು. ವಜಾಗೊಂಡವರಲ್ಲಿ ರಶೀದ್ ಶಿಗನ್ ಎಂಬ ಪೊಲೀಸ್ ಕೂಡ ಸೇರಿದ್ದಾನೆ. ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಆತನ ಮೇಲಿದೆ. ಉಳಿದ ನಾಲ್ವರು ಶಾಲಾ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ವಜಾಗೊಂಡವರಲ್ಲಿ ಓರ್ವ ತಹಸೀಲ್ದಾರ್, ಸಹಾಯಕ ಪ್ರಾಧ್ಯಾಪಕ ಮತ್ತು ಶಾಲಾ ಶಿಕ್ಷಕ ಕೂಡ ಸೇರಿದ್ದಾರೆ.
ಹಿಜ್ಬುಲ್ ಸಂಘಟನೆಗೆ ಸಹಕರಿಸಿದ ಆರೋಪದಡಿ ಮೇ 20ರಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ಸಹಾಯಕ ಅಧೀಕ್ಷಕ ದೇವಿಂದರ್ ಸಿಂಗ್‌ನನ್ನು ಸೇವೆಯಿಂದ ವಜಾ ಗೊಳಿಸಲಾಗಿತ್ತು.
ಸರ್ಕಾರಿ ನೌಕರಿಯಲ್ಲಿದ್ದುಕೊಂಡು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಗುರುತಿಸಲು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಏಪ್ರಿಲ್ ತಿಂಗಳಲ್ಲಿ ವಿಶೇಷ ಟಾಸ್ಕ್ ಫೋರ್ಸ್(ಎಸ್‌ಟಿಎಫ್) ರಚಿಸಿದೆ.
ಸರ್ಕಾರಿ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವುದು ಅಥವಾ ನಕಲಿ ಖಾತೆಯನ್ನು ಹೊಂದಿರುವುದು ಕೂಡ ರಾಷ್ಟ್ರ ವಿರೋಧಿ ಚಟುವಟಿಕೆಗಳಡಿ ಬರುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಉಗ್ರ ಸಂಘಟನೆಯ ಮುಖ್ಯಸ್ಥನೊಬ್ಬನ ಪುತ್ರರು ಸರ್ಕಾರಿ ಸೇವೆಗಳಲ್ಲಿ ನಿಯುಕ್ತಿಗೊಂಡಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.