ನವದೆಹಲಿ: ಜಮ್ಮು ಮತ್ತು ಕಾಶ್ಮೀರ ದೇಶದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನ ಎಷ್ಟೇ ಪ್ರಶ್ನೆ ಎತ್ತಿದರೂ ವಾಸ್ತವ ಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯ (ಎಂಇಎ) ಗುರುವಾರ ಸ್ಪಷ್ಟಪಡಿಸಿದೆ.
ಈ ಪ್ರದೇಶದ ಜನಸಂಖ್ಯಾ ರಚನೆಯನ್ನೇ ಬದಲಾಯಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಪಾಕಿಸ್ತಾನ ವಿದೇಶಾಂಗ ಸಚಿವರು ವಿಶ್ವಸಂಸ್ಥೆಯ ಇಬ್ಬರು ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ, ಗಡಿಯಾಚೆಗಿನ ಭಯೋತ್ಪಾದನೆಯನ್ನು ಒಪ್ಪಲಾಗದು ಎಂದು ತಿರುಗೇಟು ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಎಷ್ಟೇ ಪ್ರಶ್ನೆ ಎತ್ತಿದರೂ ವಾಸ್ತವ ಸ್ಥಿತಿಯನ್ನು ಬದಲಿಸಲು ಸಾಧ್ಯವಿಲ್ಲ. ಜೊತೆಗೆ ಗಡಿಯಾಚೆಗಿನ ಭಯೋತ್ಪಾದನೆಯನ್ನು ಒಪ್ಪಲಾಗದು. ಈ ಕುರಿತು ಯಾವುದೇ ಸಮರ್ಥನೆಯು ಸ್ವೀಕಾರಾರ್ಹವಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ , ನಕಲಿ ವಾಸಪತ್ರ ಮತ್ತು ಇತರ ದಾಖಲೆಗಳನ್ನು ವಿತರಿಸುವ ಮೂಲಕ ಭಾರತವು ಕಾಶ್ಮೀರದ ಜನಸಂಖ್ಯಾ ರಚನೆಯನ್ನೇ ಬದಲಿಸಲು ಹೊರಟಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತದ ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.