ನವದೆಹಲಿ: ಕಳೆದ ವಾರ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವರದಿಗಾರಿಕೆ ಕಷ್ಟವಾಗುತ್ತಿದೆ.ಕಾಶ್ಮೀರದಲ್ಲಿ ತೀವ್ರ ನಿರ್ಬಂಧ ಹೇರಿದ್ದರಿಂದಇಂಟರ್ನೆಟ್, ಮೊಬೈಲ್ ಫೋನ್ ಅಥವಾ ದೂರವಾಣಿ ಸಂಪರ್ಕವಿಲ್ಲದೆ ವರದಿ ಮಾಡುವ ಹೊಸ ಸವಾಲನ್ನು ಇಲ್ಲಿ ಪತ್ರಕರ್ತರು ಎದುರಿಸಬೇಕಾಗಿದೆ.
ನಾವು ಶಿಲಾಯುಗಕ್ಕೆ ಮರಳಿದ್ದೇವೆ. ಆದರೆ ನಾವು ಸುದ್ದಿಗಳನ್ನು ಕಳುಹಿಸುವುದನ್ನು ತಪ್ಪಿಸಿಕೊಂಡಿಲ್ಲ ಎಂದು ಕೊಲ್ಕತ್ತಾ ಡೈಲಿ ಪತ್ರಿಕೆಯ ಪತ್ರಕರ್ತ ಮುಜಾಫರ್ ರೈನಾ ಹೇಳಿದ್ದಾರೆ. ಕೆಲವೊಂದು ಪತ್ರಕರ್ತರಿಗೆ ಇದೂ ಕಷ್ಟವಾಗುತ್ತಿದೆ ಎಂದಿದ್ದಾರೆ ಅವರು.
ವಿದೇಶಿ ಪತ್ರಕರ್ತರು ವ್ಯಕ್ತಿಗಳ ಕೈಯಲ್ಲಿ ಸುದ್ದಿ ಕಳಿಸಿಕೊಟ್ಟು ಇಲ್ಲವೇ ಅವರೇ ಅಲ್ಲಿಂದ ಇಲ್ಲಿಗೆ ಪ್ರಯಾಣ ಮಾಡಿ ಸುದ್ದಿಗಳನ್ನು ಕಳುಹಿಸುತ್ತಾರೆ. ಭಾರತದ ಹಲವಾರು ಮಾಧ್ಯಮ ಸಂಸ್ಥೆಗಳು ಪ್ಯಾರಾಚೂಟ್ ಬಳಸಿ ಆ ಪ್ರದೇಶಕ್ಕೆ ಹೋಗಿ ಸುದ್ದಿ ಸಂಗ್ರಹಿಸಿ ವಾಪಸ್ ಬರುತ್ತಿವೆ. ಹಲವಾರು ಪತ್ರಕರ್ತರು ಇತರ ಸ್ನೇಹಿತರ ಸಹಾಯ ಪಡೆದು, ಒಬಿ ವ್ಯಾನ್‌ಗಳ ಮೂಲಕವೂ ದೆಹಲಿ ಕಚೇರಿಗೆ ಸುದ್ದಿ ಕಳುಹಿಸಿದ್ದಾರೆ.
ನಾನು ನನ್ನ ಲ್ಯಾಪ್‌ಟಾಪ್‌ನಲ್ಲಿಯೇ ಸುದ್ದಿಯೊಂದನ್ನು ಬರೆದು ಆ ಸುದ್ದಿಯ ವಿಡಿಯೊ ಕ್ಲಿಕ್ಕಿಸಿ ಒಬಿ ಮೂಲಕ ಕಳುಹಿಸಿದ್ದೆ. ಶ್ರೀನಗರದಲ್ಲಿರುವ ಆ ಸುದ್ದಿವಾಹಿನಿಯಕಚೇರಿಯು ಅದನ್ನು ದೆಹಲಿಗೆ ಕಳುಹಿಸಿದ್ದು ಅದು ಆ ವಿಡಿಯೊವನ್ನು ನನ್ನ ಕಚೇರಿಗೆ ಕಳುಹಿಸಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದರ ಪತ್ರಕರ್ತ ಪೀರ್‌ಜಾದಾ ಆಶಿಕ್ ಹೇಳಿದ್ದಾರೆ.
ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ದಿನ ಕೆಲವು ಸುದ್ದಿ ವಾಹಿನಿಗಳು, ಒಬಿ ವ್ಯಾನ್ ಅಲ್ಲಿಂದ ಗ್ರೌಂಡ್ ರಿಪೋರ್ಟಿಂಗ್ ಮಾಡಿದ್ದವು. ಆದರೆ ಮುದ್ರಣ ಮಾಧ್ಯಮದ ಪತ್ರಕರ್ತರಿಗೆ ಅಲ್ಲಿಂದ ಸುದ್ದಿ ವರದಿ ಮಾಡಲು ಸಾಧ್ಯವಾಗಲಿಲ್ಲ ಎಂದಿದೆ ಹಿಂದೂಸ್ತಾನ್ ಟೈಮ್ಸ್.
ಕಾಶ್ಮೀರ ಕಣಿವೆಯಲ್ಲಿ ನಿಷೇಧಾಜ್ಞೆ ಹೇರಿದ್ದರಿಂದ ಸಾವಿರಾರು ಭದ್ರತಾ ಸಿಬ್ಬಂದಿಗಳು ರಸ್ತೆಯಲ್ಲಿ ಕರ್ತವ್ಯ ನಿರತರಾಗಿದ್ದರು. ಕಾಶ್ಮೀರದಲ್ಲಿ ಸಂಪೂರ್ಣವಾಗಿ ಸಂಪರ್ಕ ಕಡಿತಗೊಳಿಸಲಾಗಿತ್ತು.
ಕಾಶ್ಮೀರದಲ್ಲಿರುವ ಪತ್ರಕರ್ತರಿಗೆ ಅದೊಂದು ಆಘಾತ ಮತ್ತು ಕಷ್ಟದ ವಿಷಯವಾಗಿತ್ತು.ಅಲ್ಲಿನ ಜನರ ಕತೆಗಳನ್ನು ವರದಿ ಮಾಡುವುದಕ್ಕಾಗಿ ನಾವು ಅಲ್ಲಿ ಇರಬೇಕಾಗಿತ್ತು ಎಂದು ವಿದೇಶ ಮಾಧ್ಯಮ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಿಯಾದ್ ಮಸ್ರೂರ್ ಹೇಳಿದ್ದಾರೆ.
ಮೊದಲ ಮೂರು ದಿನಗಳಲ್ಲಿ ನಾವು ವಿಮಾನ ನಿಲ್ದಾಣಕ್ಕೆ ಹೋಗಿ ನಾವು ಬರೆದ ಸುದ್ದಿಯನ್ನು ಪೆನ್‌ಡ್ರೈವ್‌ಗಳಲ್ಲಿ ಸೇವ್ ಮಾಡಿ ಅಪರಿಚಿತ ವ್ಯಕ್ತಿಗಳ ಕೈಯಲ್ಲಿ ಕೊಟ್ಟು ಕಳುಹಿಸುತ್ತಿದ್ದೆವು.ನಾವು ಕಳುಹಿಸಿದ ಸುದ್ದಿ ನಮ್ಮ ಕಚೇರಿಗೆ ತಲುಪಲಿದೆಯೇಇಲ್ಲವೋ ಎಂಬ ನಂಬಿಕೆಯೂ ನಮಗೆ ಇರುತ್ತಿರಲಿಲ್ಲ.ಶ್ರೀನಗರಕ್ಕೆ ಮಧ್ಯಾಹ್ನ 2 ಗಂಟೆಗೆ ಒಬ್ಬ ಪತ್ರಕರ್ತನನ್ನು ಕಳುಹಿಸಿ ಸಂಜೆ 5.30ರ ವೇಳೆಗೆ ಆತನಕೈಯಲ್ಲಿ ಸುದ್ದಿಯನ್ನು ಕೊಟ್ಟು ಕಳಿಸುತ್ತಿದ್ದೆವು ಅಂತಾರೆ ಮಸ್ರೂರ್.
ಹಿರಿಯ ಅಧಿಕಾರಿಗಳ ಸಹಾಯದಿಂದ ಕೆಲವು ಪತ್ರಕರ್ತರು ಇಂಟರ್ನೆಟ್ ಸಂಪರ್ಕ ಗಿಟ್ಟಿಸಿಕೊಂಡಿದ್ದರು.ಆದರೆ ಆಗಸ್ಟ್ 5ರಿಂದ ಶ್ರೀನಗರ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಸ್ವಲ್ಪ ಇಂಟರ್ನೆಟ್ ಸಂಪರ್ಕ ಸಿಗುತ್ತಿತ್ತು.ಅದನ್ನು ಬಳಸಿ ಸ್ಥಳೀಯ ಪತ್ರಕರ್ತರು ಸುದ್ದಿ ಮಾಡುತ್ತಾರೆ ಎಂದು ತಿಳಿದಾಕ್ಷಣ ಅದನ್ನೂ ನಿಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.