ADVERTISEMENT

ಕಾಶ್ಮೀರದಲ್ಲಿ ವರ್ಷದಿಂದ ಒಳನುಸುಳುವಿಕೆ ಅವ್ಯಾಹತ?

ಆಗಸ್ಟ್‌ನಿಂದಲೇ ಅಫ್ರಾವತ್ ಪರ್ವತದಲ್ಲಿ ಅಡಗಿದ್ದ ಗುಲ್ಮಾರ್ಗ್‌ ದಾಳಿಕೋರರು

ಪಿಟಿಐ
Published 27 ಅಕ್ಟೋಬರ್ 2024, 23:30 IST
Last Updated 27 ಅಕ್ಟೋಬರ್ 2024, 23:30 IST
<div class="paragraphs"><p>ಗುಲ್ಮಾರ್ಗ್‌–ಬೋಠಾಪಾಥರಿ ಮಾರ್ಗದಲ್ಲಿ ಕಾವಲು ಕಾಯುತ್ತಿರುವ ಯೋಧ. </p></div>

ಗುಲ್ಮಾರ್ಗ್‌–ಬೋಠಾಪಾಥರಿ ಮಾರ್ಗದಲ್ಲಿ ಕಾವಲು ಕಾಯುತ್ತಿರುವ ಯೋಧ.

   

ಪಿಟಿಐ ಸಂಗ್ರಹ ಚಿತ್ರ

ಶ್ರೀನಗರ/ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಗನಗೀರ್‌‌ನಲ್ಲಿ ಅಕ್ಟೋಬರ್ 20ರಂದು ನಡೆದ ಭಯೋತ್ಪಾದಕ ದಾಳಿ ಕುರಿತ ತನಿಖೆಯು, ಗುಪ್ತಚರ ಮಾಹಿತಿಯು ನಿಖರವಾಗಿ ಇಲ್ಲದಿರುವುದನ್ನು ಹಾಗೂ ಕಳೆದ ಒಂದು ವರ್ಷದಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅನಿಯಂತ್ರಿತ ಒಳನುಸುಳುವಿಕೆ ನಡೆದಿರುವುದನ್ನು ಸೂಚಿಸುತ್ತಿದೆ.

ADVERTISEMENT

ಈ ದಾಳಿಯಲ್ಲಿ ಒಟ್ಟು ಏಳು ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಈ ದಾಳಿಯು, ಸ್ಥಳೀಯ ಯುವಕರು ಉಗ್ರಗಾಮಿ ಸಂಘಟನೆಗಳಿಗೆ ಸೇರುತ್ತಿರುವ ಬಗ್ಗೆ ಕಳವಳ ಹುಟ್ಟಿಸಿದೆ. ದಾಳಿ ನಡೆಸಿದ ಇಬ್ಬರು ಭಯೋತ್ಪಾದಕರಲ್ಲಿ ಒಬ್ಬಾತ ದಕ್ಷಿಣ ಕಾಶ್ಮೀರದ ಕುಲ್ಗಾಂ ಮೂಲದವ. ಈತ 2023ರಲ್ಲಿ ಭಯೋತ್ಪಾದಕ ಸಂಘಟನೆಯನ್ನು ಸೇರಿದ್ದ. ಇನ್ನೊಬ್ಬ ಭಯೋತ್ಪಾದಕ ಪಾಕಿಸ್ತಾನದಿಂದ ಒಳನುಸುಳಿ ಬಂದಿದ್ದ ಎಂದು ನಂಬಲಾಗಿದೆ.

ಸ್ಥಳೀಯ ಯುವಕರು ಬಹಳ ಬೇಗನೆ ಉಗ್ರಗಾಮಿಗಳಾಗಿ ಪರಿವರ್ತಿತರಾಗುತ್ತಿದ್ದಾರೆ ಎಂದು ಭದ್ರತಾ ಸಂಸ್ಥೆಗಳ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇಂಥವರನ್ನು ಗುರುತಿಸಲು ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯ ಇದೆ ಎಂದು ಅವರು ಒತ್ತಿ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ನಾಯಕತ್ವದಲ್ಲಿ ಹಾಗೂ ಭಾರತೀಯ ಸೇನೆಯ 15ನೆಯ ಕೋರ್‌ನ ನಾಯಕತ್ವದಲ್ಲಿ ಈಚೆಗೆ ಕೆಲವು ಬದಲಾವಣೆ ತಂದಿದ್ದು, ಸ್ಥಳೀಯ ಯುವಕರು ಭಯೋತ್ಪಾದಕರ ತೆಕ್ಕೆಗೆ ಸಿಲುಕುವುದನ್ನು ತಡೆಯುವ ಉದ್ದೇಶದಿಂದ ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸಲು ಆದ್ಯತೆ ನೀಡಲಾಗಿದೆ.

ಕಳೆದ ವರ್ಷದ ಡಿಸೆಂಬರ್‌ನಿಂದ ಈಚೆಗೆ ಬೇರೆ ಬೇರೆ ಕಡೆಗಳಿಂದ ಒಳನುಸುಳುವಿಕೆ ಯತ್ನಗಳು ನಡೆದಿರುವ ಬಗ್ಗೆ ಗುಪ್ತಚರ ವರದಿಗಳು ಇವೆ. ಆದರೆ, ಪೂರಕ ಮಾಹಿತಿ ಇಲ್ಲದ ಕಾರಣ ಈ ವರದಿಗಳನ್ನು ಸೇನೆಯು ಒಪ್ಪಿಲ್ಲ.

ಗುಲ್ಮಾರ್ಗ್‌ ಪ್ರದೇಶದಲ್ಲಿ ಗುರುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಉಗ್ರರು ಅಫ್ರಾವತ್ ಪರ್ವತ ಪ್ರದೇಶದಲ್ಲಿ ಆಗಸ್ಟ್‌ ತಿಂಗಳಿನಿಂದಲೂ ಅಡಗಿದ್ದರು ಎಂದು ಭಾವಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಭಯೋತ್ಪಾದಕರು, ನುಸುಳುಕೋರರು ಸ್ಥಳೀಯರ ಜೊತೆ ಸೇರಿಕೊಂಡು, ಪಾಕಿಸ್ತಾನದಲ್ಲಿನ ತಮ್ಮ ನಾಯಕರಿಂದ ಸೂಚನೆ ಬಂದ ನಂತರ ದಾಳಿ ನಡೆಸುವ ತಂತ್ರವನ್ನು ಹಣಿಯಲು ದೇಶದ ಭದ್ರತಾ ಸಂಸ್ಥೆಗಳು ಈ ಮೊದಲು ಬಹಳ ಪರಿಶ್ರಮ ಹಾಕಿದ್ದವು.

ಸ್ಥಳೀಯ ಯುವಕರನ್ನು ಭಯೋತ್ಪಾದಕ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯು ಆನ್‌ಲೈನ್‌ ವೇದಿಕೆಗಳ ಮೂಲಕ ಹೆಚ್ಚಾಗಿರುವುದನ್ನು ಭದ್ರತಾ ಸಂಸ್ಥೆಗಳು ಗಮನಿಸಿವೆ. ಭಯೋತ್ಪಾದಕರು ಟೆಲಿಗ್ರಾಂ, ಮಾಸ್ಟೊಡನ್‌ನಂತಹ ವೇದಿಕೆಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.