ಶ್ರೀನಗರ: ಕಳೆದ ವರ್ಷ ಫೆಬ್ರುವರಿಯಲ್ಲಿ ಪುಲ್ವಾಮಾದಲ್ಲಿ ಭದ್ರತಾ ಪಡೆಗಳ ಮೇಲೆ ನಡೆಸಿದ ರೀತಿಯಲ್ಲೇ ಮತ್ತೊಂದು ದಾಳಿ ನಡೆಸಲುಪ್ರಯತ್ನಿಸಿ ಪರಾರಿಯಾಗಿದ್ದ ಕಾರು ಮಾಲೀಕನ ಗುರುತನ್ನು ಜಮ್ಮು–ಕಾಶ್ಮೀರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿಯನ್ನು ಹಿದಾಯತುಲ್ಲಾ ಮಲಿಕ್ ಎಂದು ಗುರುತಿಸಲಾಗಿದ್ದು, ಈತ ಸೋಪಿಯಾನ್ ನಿವಾಸಿಯಾಗಿದ್ದು, ಕಳೆದ ವರ್ಷ ಹಿಜ್ಬುಲ್ ಮುಜಾಹೀದ್ದೀನ್ (ಎಚ್‌ಎಂ) ಸಂಘಟನೆಗೆ ಸೇರಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆಗಳನ್ನು ಗುರಿಯಾಗಿರಿಸಿಕೊಂಡು ಕಾರು ಬಾಂಬ್ ಮೂಲಕ ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯೆ ದಾಳಿ ನಡೆಸಲು ಹಿಜ್ಬುಲ್ ಮುಜಾಹೀದ್ದೀನ್ (ಎಚ್‌ಎಂ) ಮತ್ತು ಜೈಷ್–ಇ–ಮೊಹಮ್ಮದ್ (ಜೆಇಎಂ) ಉಗ್ರಗಾಮಿ ಸಂಘಟನೆಗಳು ಈ ಸಂಚು ರೂಪಿಸಿದ್ದವು.
ಕಳೆದ ವಾರ ಉಗ್ರರ ಸಂಚಿನ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಹೀಗಾಗಿ, ಬುಧವಾರ ಪುಲ್ವಾಮಾದಲ್ಲಿ ಬಂದೋಬಸ್ತ್ ಕೈಗೊಂಡು ತಪಾಸಣೆಗೆ ನಾಕಾಗಳನ್ನು ಸ್ಥಾಪಿಸಲಾಗಿತ್ತು. ಬುಧವಾರ ಸಂಜೆ ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ಬಿಳಿ ಬಣ್ಣದ ಕಾರು ನಾಕಾ ಸಮೀಪ ಬಂದಾಗ ಎಚ್ಚರಿಕೆ ನೀಡಿದ ಪೊಲೀಸರು ಗುಂಡು ಹಾರಿಸಿದರು. ತಕ್ಷಣವೇ ಉಗ್ರರು ಕಾರು ತಿರುಗಿಸಿಕೊಂಡು ಪರಾರಿಯಾದ್ದರು. ಇನ್ನೊಂದು ನಾಕಾದಲ್ಲೂ ಪೊಲೀಸರು ಎಚ್ಚರಿಕೆ ನೀಡಿ ಗುಂಡು ಹಾರಿಸಿದರು. ಆದರೆ, ಸ್ಥಳದಲ್ಲೇ ಕಾರು ಬಿಟ್ಟ ಉಗ್ರರು ಕತ್ತಲಲ್ಲಿ ಪರಾರಿಯಾಗಿದ್ದರು.
ಗುರುವಾರ ಬೆಳಗಿನ ಜಾವ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ವಾಹನದಲ್ಲಿ ಅಪಾರ ಪ್ರಮಾಣದ ಸುಧಾರಿತ ಸ್ಫೋಟಕಗಳಿದ್ದವು. ಈ ಸ್ಫೋಟಕಗಳನ್ನು ನಿರ್ಜನ ಪ್ರದೇಶದಲ್ಲಿ ನಿಷ್ಕ್ರಿಯಗೊಳಿಸಲಾಯಿತ್ತು.
ಪುಲ್ವಾಮಾದಲ್ಲಿ ಕಳೆದ ವರ್ಷ ಫೆಬ್ರುವರಿ 14ರಂದು ನಡೆಸಿದ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.