ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭಾನುವಾರ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಆರು ಮಂದಿ ಉಗ್ರರು ಹತ್ಯೆಯಾಗಿದ್ದು, ಸೇನಾ ಪಡೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ, ಕುಲ್ಗಾಂನ ಮುದರ್ಘಾಮ್ ಹಾಗೂ ಚಿನ್ನಿಗಂ ಗ್ರಾಮಗಳಲ್ಲಿ ಶನಿವಾರ ಸೇನಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ, ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಶನಿವಾರ ಸಂಜೆಯ ವೇಳೆಗೆ ನಾಲ್ವರು ಉಗ್ರರು ಹತ್ಯೆಯಾದರೆ, ಇಬ್ಬರು ಸೈನಿಕರು ಹುತಾತ್ಮರಾದರು. ಭಾನುವಾರ ಬೆಳಿಗ್ಗೆ ಎನ್‌ಕೌಂಟರ್ ನಡೆದ ಸ್ಥಳದಿಂದ ಇನ್ನೂ ಇಬ್ಬರು ಉಗ್ರರ ಶವ ಪತ್ತೆಯಾಗಿದೆ.
ಪ್ಯಾರಾ ಕಮಾಂಡೊದ ಲ್ಯಾನ್ಸ್ ನಾಯಕ್ ಪ್ರದೀಪ್ ನೈನ್ ಹಾಗೂ ರಾಷ್ಟ್ರೀಯ ರೈಫಲ್ಸ್ 1ರ ಹವಾಲ್ದಾರ್ ರಾಜ್‌ಕುಮಾರ್ ಉಗ್ರರ ಜೊತೆಗಿನ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಮೃತಪಟ್ಟ ಭಯೋತ್ಪಾದಕರು ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್ ಎ ತೊಯಬಾ ಸಂಘಟನೆಗೆ ಸೇರಿದವರು ಎಂದು ಸ್ಥಳೀಯರು ತಿಳಿಸಿದ್ದಾರೆ.
‘ಎನ್‌ಕೌಂಟರ್‌ನಲ್ಲಿ ಆರು ಮಂದಿ ಭಯೋತ್ಪಾದಕರನ್ನು ಹತ್ಯೆಮಾಡಲಾಗಿದೆ. ಭದ್ರತಾ ಪಡೆಗಳಿಗೆ ಸಿಕ್ಕ ದೊಡ್ಡ ಯಶಸ್ಸಿ ಇದು. ಸಂಘರ್ಷ ನಡೆದ ಸ್ಥಳದಲ್ಲಿ ರೈಫಲ್ಸ್, ಗ್ರೆನೇಡ್, ಸಂವಹನ ಉಪಕರಣಗಳು ಸೇರಿದಂತೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರ ಉಪಟಳಕ್ಕೆ ಕಡಿವಾಣ ಹಾಕಲು ನೆರೆಯ ಜಿಲ್ಲೆಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಚೆಕ್‌ಪೋಸ್ಟ್ ಸ್ಥಾಪಿಸಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ’ ಎಂದು ಜಮ್ಮು–ಕಾಶ್ಮೀರದ ಪೊಲೀಸ್ ಮುಖ್ಯಸ್ಥ ಆರ್.ಆರ್. ಸ್ವೈನ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.