ADVERTISEMENT

ಸಂವಿಧಾನದ 370ನೇ ವಿಧಿ ಮತ್ತು ‘35–ಎ’ ಕಲಂ ಸಮಗ್ರ ಮಾಹಿತಿ

ಕಾಶ್ಮೀರ ಮತ್ತು 35ಎ, 370: ಬದಲಾಗುತ್ತಾ ಸ್ಥಿತಿಗತಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 5:17 IST
Last Updated 7 ಆಗಸ್ಟ್ 2019, 5:17 IST
   

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ವದಂತಿ ಕಳೆದ ಕೆಲವು ದಿನಗಳಿಂದ ದಟ್ಟವಾಗಿದೆ. ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳೂ ಅದಕ್ಕೆ ಪುಷ್ಟಿ ನೀಡಿವೆ. ಸಂವಿಧಾನದ 370ನೇ ವಿಧಿ ಮತ್ತು ‘35–ಎ’ ಕಲಂ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದು ಮಾಡಲು ಕೇಂದ್ರದ ಎನ್‌ಡಿಎ ಸರ್ಕಾರ ಮುಂದಾಗಿದೆ ಎಂಬ ಆರೋಪಗಳೂ ಇವೆ. ಈ ಮಧ್ಯೆ, ಕಣಿವೆ ರಾಜ್ಯಕ್ಕೆ ಸಂಬಂಧಿಸಿದ ಮಹತ್ವದ ಕೆಲ ಮಸೂದೆಗಳು ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.

ಕಳೆದ ನಾಲ್ಕೈದು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 25 ಸಾವಿರದಿಂದ 30 ಸಾವಿರವರೆಗೆ ಹೆಚ್ಚುವರಿ ಸೇನಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಅಲ್ಲಿನ ಭದ್ರತೆಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಸೇರಿದಂತೆ ಉನ್ನತಾಧಿಕಾರಿಗಳ ಸಭೆ ನಡೆಸಿದ್ದಾರೆ. ಶ್ರೀನಗರ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿಸಂವಿಧಾನದ 370ನೇ ವಿಧಿ ಮತ್ತು ‘35–ಎ’ ಕಲಂ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.

ADVERTISEMENT

ಏನಿದು 370ನೇ ವಿಧಿ?

ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದರ ಹಿಂದೆ ಇತಿಹಾಸವಿದೆ. ಕಣಿವೆ ರಾಜ್ಯದ ಮೇಲೆ 1947ರಲ್ಲಿ ಪಾಕಿಸ್ತಾನ ಪ್ರಚೋ­ದಿತ ದಾಳಿ ನಡೆಯುತ್ತದೆ. ಇದಕ್ಕೆ ಹೆದರಿದ ಅಲ್ಲಿನ ಕೊನೆಯ ರಾಜ ಹರಿಸಿಂಗ್‌ ಓಡಿಬಂದು ಭಾರತದ ಬೆಂಬಲ ಕೇಳುತ್ತಾರೆ. ನೆರವು ಕೊಡಲು ಸರ್ಕಾರ ಷರತ್ತು ಹಾಕುತ್ತದೆ. ಅದೇ ವಿಲೀನದ ಷರತ್ತು. ಈ ಹಿನ್ನೆಲೆಯಲ್ಲಿ ಸಂವಿ­ಧಾನದ 370ನೇ ಕಲಂ ಹುಟ್ಟು ಪಡೆಯುತ್ತದೆ. ಅದರಂತೆ ಕಾಶ್ಮೀರದ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಕ್ಷೇತ್ರಗಳು ಕೇಂದ್ರ ಸರ್ಕಾ­ರದ ಅಧೀನಕ್ಕೆ ಒಳಪಡುತ್ತವೆ. ಉಳಿದೆಲ್ಲ ಅಧಿ­ಕಾರ ರಾಜ್ಯದಲ್ಲಿ ಉಳಿಯುತ್ತದೆ. ಉಭಯ ಪಕ್ಷಗಳು ನಿಯಮ ಮೀರಿ ಆಚೀಚೆ ಸರಿಯು­ವಂತಿಲ್ಲ. ಇದರಲ್ಲಿ ಏನೇ ಬದಲಾವಣೆ ಆಗ­ಬೇ­ಕಾದರೂ ಸಂವಿಧಾನ ಸಮಿತಿಯಲ್ಲಿ ಚರ್ಚೆ ಆಗ­ಬೇಕು. ಆದರೆ ಈಗ ಸಂವಿಧಾನ ಸಮಿತಿ ಇಲ್ಲದಿರು­ವು­ದ­ರಿಂದ ಸಂಸತ್ತು, ರಾಜ್ಯ ವಿಧಾನಸಭೆಯದೇ ಪರ­ಮಾಧಿಕಾರವಾಗಿದೆ.

ಸಂವಿಧಾನದ 370ನೇ ವಿಧಿಯು ಜಮ್ಮು-ಕಾಶ್ಮೀರ ರಾಜ್ಯದ ಕುರಿತು ವಿವರಿಸುತ್ತದೆ. ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನವು ಅಸ್ತಿತ್ವದಲ್ಲಿದೆ. 1956ರ ನವೆಂಬರ್‌ 17ರಂದು ರಾಜ್ಯದ ವಿಧಾನಸಭೆಯು ಸರ್ವಾನುಮತದಿಂದ ಇದನ್ನು ಅಂಗೀಕರಿಸಿದೆ. ಈ ಸಂವಿಧಾನದ 1ರಿಂದ8 ಮತ್ತು 158ನೇ ವಿಧಿಗಳು ಅಂದೇ ಜಾರಿಗೆ ಬಂದಿವೆ. ಉಳಿದೆಲ್ಲಾ ವಿಧಿಗಳು ಜಾರಿಗೆ ಬಂದದ್ದು 1957ರ ಜನವರಿ 26ರಂದು.

ಇದರಿಂದಾಗಿಯೇ ಜಮ್ಮು-ಕಾಶ್ಮೀರದ ಸಂವಿಧಾನವು ದೇಶದಲ್ಲಿ ಜಾರಿಯಲ್ಲಿರುವ ಎರಡನೇ ಸಂವಿಧಾನ ಎಂದೂ ಹೇಳಲಾಗುತ್ತಿದೆ. ಕಾಶ್ಮೀರದ ಸಂವಿಧಾನವು ತಿದ್ದುಪಡಿಗೊಳ್ಳುವುದು ಅಲ್ಲಿನ ವಿಧಾನಸಭೆಯಲ್ಲಿ. ಈ ರಾಜ್ಯದಲ್ಲಿ ಆಸ್ತಿ ಹೊಂದಿರುವವರು ಪ್ರತ್ಯೇಕ ಕಾನೂನು ಪಾಲಿಸಬೇಕು ಹಾಗೂ ಪ್ರತ್ಯೇಕ ನಾಗರಿಕತೆ ಹೊಂದಿರಬೇಕು ಎನ್ನುತ್ತದೆ ಈ ವಿಧಿ. ರಾಜ್ಯದ ಜನರ ಮೂಲಭೂತ ಹಕ್ಕುಗಳು ಕೂಡ ಇತರ ರಾಜ್ಯಗಳಿಗಿಂತ ಭಿನ್ನವಾಗಿದೆ.

‘35–ಎ’ ಕಲಂ ಏನು ಹೇಳುತ್ತೆ?

ಇದು ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವುದಕ್ಕೆ ಸಂಬಂಧಿಸಿದ್ದು. 35–ಎ ಕಲಂ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು, ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿಲ್ಲ. ಅಲ್ಲದೆ ಶಿಕ್ಷಣ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರು. ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ. ಆದರೆ, ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ. ಜತೆಗೆ, ಆತನ ಪತ್ನಿಗೂ ಈ ಎಲ್ಲ ಹಕ್ಕುಗಳು ಪ್ರಾಪ್ತವಾಗುತ್ತವೆ. ಸಂವಿಧಾನಕ್ಕೆ ಈ ಕಲಂ ಸೇರ್ಪಡೆಯಾಗಿದ್ದು ಕೂಡ ಸಂಸತ್ತಿನ ನಿರ್ಣಯದ ಮೂಲಕ ಅಲ್ಲ. ಬದಲಿಗೆ, ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಇರುವ ವಿಶೇಷಾಧಿಕಾರ ಬಳಸಿ ರಾಷ್ಟ್ರಪತಿ ಹೊರಡಿಸಿದ ಅಧಿಸೂಚನೆಯ ಮೂಲಕ. 1954ರಲ್ಲಿ ರಾಷ್ಟ್ರಪತಿಗಳು ಅಧಿಸೂಚನೆ ಹೊರಡಿಸಿದ್ದರು.

ಚರ್ಚೆಯಾಗುತ್ತಿರುವುದು ಇದೇ ಮೊದಲಲ್ಲ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿ ದಶಕಗಳಿಂದಲೂ ಚರ್ಚೆಯಾಗುತ್ತಿದೆ. ಅದನ್ನು ರದ್ದುಪಡಿಸಬೇಕು ಎನ್ನುವುದು ಒಂದು ವರ್ಗದವರ ವಾದವಾದರೆ, ಸ್ಥಾನಮಾನ ಇರಬೇಕು ಎನ್ನುವುದು ಇನ್ನೊಂದು ವರ್ಗದ ವಾದ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ವಿಶೇಷ ಸ್ಥಾನಮಾನ ಪ್ರಶ್ನಿಸಿ ಬಲಪಂಥೀಯ ಸಂಘಟನೆಗಳ ಬೆಂಬಲದೊಂದಿಗೆ ಸ್ವಯಂಸೇವಾ ಸಂಸ್ಥೆಯೊಂದು 2018ರಲ್ಲಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಬಳಿಕ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಮುಂದೂಡಿತ್ತು.

ವಿಶೇಷ ಸ್ಥಾನಮಾನ ಬೇಡ ಎನ್ನುವವರ ವಾದವೇನು?:‘ವಿಶೇಷ ಸ್ಥಾನಮಾನವು ತಾರತಮ್ಯ ಸೃಷ್ಟಿಸುತ್ತದೆ; ಎಲ್ಲರೂ ಸಮಾನರು ಎಂಬ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧ’ ಎಂಬುದುಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಾದ.‘35–ಎ ಕಲಂನಿಂದಾಗಿಅಲ್ಲಿನ ಮಹಿಳೆ ರಾಜ್ಯದ ಹೊರಗಿನವರನ್ನು ಮದುವೆಯಾದರೆ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ; ಆದರೆ ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ; ಆತನ ಪತ್ನಿಗೂ ಈ ಎಲ್ಲ ಹಕ್ಕುಗಳು ಪ್ರಾಪ್ತವಾಗುತ್ತವೆ’. ಇದು ಕಾಶ್ಮೀರಿ ಮಹಿಳೆಗೆ ಮಾಡುವ ಅನ್ಯಾಯ, ಲಿಂಗ ತಾರತಮ್ಯ ಎಂಬುದು ಆರ್‌ಎಸ್‌ಎಸ್‌ನ ಆರೋಪ

ವಿಶೇಷ ಸ್ಥಾನಮಾನ ಬೇಕು ಎನ್ನುವವರ ವಾದವೇನು?:35–ಎ ಮತ್ತು 370ನೇ ವಿಧಿ ರದ್ದಾದರೆ ಇಡೀ ರಾಜ್ಯದ ಜನಸಂಖ್ಯೆ ಮತ್ತು ಜನಾಂಗೀಯ ಸ್ವರೂಪವೇ ಏರುಪೇರಾದೀತು ಎಂಬುದು ಅಲ್ಲಿನವರ ಆತಂಕ. 35–ಎ ರದ್ದುಪಡಿಸುವುದಕ್ಕೆ ಪ್ರತ್ಯೇಕತಾವಾದಿ ಸಂಘಟನೆಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ವಿಶೇಷ ಸ್ಥಾನಮಾನ ರದ್ದು ಮಾಡುವುದೆಂದರೆ ಕಾಶ್ಮೀರ ವಿಲೀನದ ವೇಳೆ ರಾಜ ಹರಿಸಿಂಗ್ ಜತೆ ಮಾಡಿಕೊಂಡ ಷರತ್ತಿನ ಉಲ್ಲಂಘನೆಯೂ ಆಗುತ್ತದೆ ಎಂಬುದು ಇನ್ನೊಂದು ವಾದ.

ರದ್ದುಗೊಳಿಸುವುದು ಸುಲಭವಲ್ಲ; ಸಂಸತ್‌ಗೂ ಅಧಿಕಾರ ಇಲ್ಲ!

ಕಾಶ್ಮೀರದ ಸಂವಿಧಾನವು ತಿದ್ದುಪಡಿಗೊಳ್ಳುವುದು ಏನಿದ್ದರೂ ಅಲ್ಲಿನ ವಿಧಾನಸಭೆಯಲ್ಲೇ. ಈ ವಿಚಾರದಲ್ಲಿರಾಜ್ಯ ವಿಧಾನಸಭೆಯದ್ದೇ ಪರ­ಮಾಧಿಕಾರ. ಆ ರಾಜ್ಯಕ್ಕೆ ಸಂಬಂಧಿಸಿದಂತೆ ಕಾನೂನನ್ನು ರೂಪಿಸುವ ಅಧಿಕಾರ ಸಂಸತ್ತಿಗೆ ಕೂಡ ಇರುವುದಿಲ್ಲ. ಆದರೆ, ವಿಲೀನದ ವೇಳೆ ಮಾಡಿಕೊಂಡ ಷರತ್ತಿನಂತೆ ರಕ್ಷಣೆ, ವಿದೇಶಾಂಗ ವ್ಯವಹಾರ, ಹಣಕಾಸು ಹಾಗೂ ಸಂವಹನಗಳ ಕುರಿತಂತೆ ಇರುವ ಕಾಯ್ದೆಗಳನ್ನು ಸಂಸತ್‌ನಲ್ಲಿ ತಿದ್ದುಪಡಿ ಮಾಡಬಹುದು. ಇದನ್ನು ಹೊರತುಪಡಿಸಿ ಇತರ ಯಾವುದೇ ಕಾಯ್ದೆಗಳನ್ನು ಜಮ್ಮು-ಕಾಶ್ಮೀರದಲ್ಲಿ ಜಾರಿಗೆ ತರಬೇಕಾದರೆ ಆ ರಾಜ್ಯದ ಅನುಮತಿ ಅಗತ್ಯ. ಒಂದು ವೇಳೆ ಕಾನೂನು ರೂಪಿಸಲೇಬೇಕಿದ್ದಲ್ಲಿ, ಅದನ್ನು ರಾಷ್ಟ್ರಪತಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮುಟ್ಟಿಸಿ ಅಲ್ಲಿಯ ವಿಧಾನಸಭೆಯಲ್ಲಿ ಮಂಡಿಸಬೇಕು.

ಕೇಂದ್ರದ ತಂತ್ರ ಏನಿರಬಹುದು?

ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತವಿದೆ. ಹೀಗಾಗಿ ಸಂಸತ್‌ನಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ರಾಷ್ಟ್ರಪತಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮುಟ್ಟಿಸಬಹುದು.ಬಳಿಕ ಅಲ್ಲಿನ ರಾಜ್ಯಪಾಲರಿಂದ ಅನುಮತಿ ಪಡೆದಂತೆ ಮಾಡುವುದು ಕೇಂದ್ರ ಸರ್ಕಾರದ ತಂತ್ರ ಇರಬಹುದು ಎನ್ನಲಾಗುತ್ತಿದೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.