ADVERTISEMENT

ಜಮ್ಮು ಬಸ್ ಅಪಘಾತ | ಕರ್ತವ್ಯ ಲೋಪ; ಆರು ಅಧಿಕಾರಿಗಳ ಅಮಾನತು

ಪಿಟಿಐ
Published 31 ಮೇ 2024, 11:31 IST
Last Updated 31 ಮೇ 2024, 11:31 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಶ್ರೀನಗರ: ಜಮ್ಮುವಿನ ಚೌಕಿ ಚೋರಾ ಪ್ರಾಂತ್ಯದ ತುಂಗಿ–ಮೋರ್ರಾ ಪ್ರದೇಶದಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ವೊಂದು ಕಮರಿಗೆ ಉರುಳಿ 22 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದಡಿ ರಾಜ್ಯ ಸಾರಿಗೆ ಇಲಾಖೆಯ ಆರು ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ನಿನ್ನೆ (ಗುರುವಾರ) ಹರಿಯಾಣದ ಕುರುಕ್ಷೇತ್ರದಿಂದ 86 ಯಾತ್ರಾರ್ಥಿಗಳನ್ನು ಹೊತ್ತ ಬಸ್‌, ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವ ಖೋರಿ ದೇಗುಲದ ಕಡೆಗೆ ಹೊರಟಿತ್ತು. ಈ ವೇಳೆ ಜಮ್ಮು–ಪೂಂಚ್‌ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್‌ ಸುಮಾರು 150 ಅಡಿ ಆಳದ ಕಣಿವೆಗೆ ಉರುಳಿದೆ. ಪರಿಣಾಮ, 22 ಮಂದಿ ಮೃತಪಟ್ಟಿದ್ದು, ಸುಮಾರು 64 ಮಂದಿ ಗಾಯಗೊಂಡಿದ್ದರು.

ADVERTISEMENT

ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಚಂದ್ರಕರ್‌ ಭಾರ್ತಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಸಾರಿಗೆ ಇಲಾಖೆ ಕಾರ್ಯದರ್ಶಿ ನೀರಜ್‌ ಕುಮಾರ್‌ ಆರು ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ.

ಕರ್ತವ್ಯ ನಿರ್ವಹಣೆ, ಕರ್ತವ್ಯ ಲೋಪದ ವಿಚಾರಣೆ ಬಾಕಿಯಿದ್ದು, ಕಥುವಾ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲಸದಲ್ಲಿದ್ದ ಅಧಿಕಾರಿಗಳನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ರಂಜೀವ್‌ ಭಾಸಿನ್‌ (ಮೋಟಾರು ವಾಹನ ನಿರೀಕ್ಷಕ), ಸುಮಿತ್‌ ಮಗೋತ್ರಾ (ಕಿರಿಯ ಸಹಾಯಕ), ಮತ್ತು ಬಹು–ಕಾರ್ಯ ಸಿಬ್ಬಂದಿಗಳಾದ (ಎಂಟಿಎಸ್‌) ಅಶ್ವನಿ ಕುಮಾರ್‌, ಅಮನ್‌ ಕುಮಾರ್‌, ಕೇಶವ್‌ ಸಿಂಗ್‌ ಮತ್ತು ರಾಕೇಶ್‌ ಕುಮಾರ್‌ ಅಮಾನತುಗೊಂಡ ಅಧಿಕಾರಿಗಳು.

ಅವಘಡದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಜಮ್ಮುವಿನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತರ ಸಂಬಂಧಿಕರಿಗೆ ಅಗತ್ಯವಿರುವ ಸಹಾಯ ಮತ್ತು ಮಾಹಿತಿ ನೀಡಲು 24 ಗಂಟೆ ಸೇವೆ ಒದಗಿಸುವ ಸಹಾಯವಾಣಿ ತೆರೆಯಲಾಗಿದೆ ಎಂದು ಜಮ್ಮು ಜಿಲ್ಲಾಧಿಕಾರಿ ಸಚಿನ್‌ ಕುಮಾರ್ ತಿಳಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಮತ್ತು ಗಾಯಾಳುಗಳಿಗೆ ತಲಾ ₹50,000 ಪರಿಹಾರವನ್ನು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.