ಜಮ್ಮು: ‘ದೇಶದ್ರೋಹವೆನಿಸುವಂತಹ ಲೇಖನ ಬರೆದ ಹಾಗೂ ಅದನ್ನು ಆನ್‌ಲೈನ್ ಸುದ್ದಿ ಪೋರ್ಟಲ್‌ನಲ್ಲಿ ಪ್ರಕಟಿಸಿದ್ದಕ್ಕಾಗಿ ಒಬ್ಬ ಪತ್ರಕರ್ತ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರುದ್ಧ ಎನ್‌ಐಎ ಕಾಯ್ದೆಯಡಿ ಸ್ಥಾಪಿಸಿರುವ ವಿಶೇಷ ನ್ಯಾಯಾಲಯವು ದೋಷಾರೋಪ ಹೊರಿಸಿದೆ.
ಪತ್ರಕರ್ತ ಪೀರಜಾದಾ ಫಹಾದ್ ಶಾ ಹಾಗೂ ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಬ್ದುಲ್ ಅಲಾ ಫಜಿಲಿ ವಿರುದ್ಧ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಶ್ವನಿಕುಮಾರ್ ಗುರುವಾರ ದೋಷಾರೋಪ ಹೊರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೀರಜಾದಾ ಹಾಗೂ ಫಜಿಲಿ ವಿರುದ್ಧ ಜಮ್ಮು–ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ತನಿಖೆ ನಡೆಸಿದೆ ಎಂದು ಅವರು ಹೇಳಿದ್ದಾರೆ.
‘ದಿ ಷ್ಯಾಕಲ್ಸ್ ಆಫ್ ಸ್ಲೇವರಿ ವಿಲ್ ಬ್ರೇಕ್’ (ಗುಲಾಮತನದ ಬೇಡಿಗಳು ಕಳಚಲಿವೆ) ಎಂಬ ಲೇಖನವನ್ನು ಫಜಿಲಿ ಬರೆದಿದ್ದರು. ಈ ಲೇಖನವನ್ನು ‘ದಿ ಕಾಶ್ಮೀರ್‌ವಾಲಾ’ ಎಂಬ ಡಿಜಿಟಲ್ ಮಾಸಿಕದಲ್ಲಿ ಅದರ ಪ್ರಧಾನ ಸಂಪಾದಕ ಹಾಗೂ ನಿರ್ದೇಶಕ ಪೀರಜಾದಾ ಶಾ ಪ್ರಕಟಿಸಿದ್ದರು. ಈ ಬಗ್ಗೆ ಕಳೆದ ವರ್ಷ ಏಪ್ರಿಲ್ 4ರಂದು ಜಮ್ಮುವಿನ ಸಿಐಜೆ ಪೊಲೀಸ್ ಠಾಣೆಗೆ, ಪ್ರಕಟಿತ ಲೇಖನದ ನಕಲು ಪ್ರತಿ ಸಮೇತ ಮಾಹಿತಿ ನೀಡಲಾಗಿತ್ತು.
‘ಜಮ್ಮು–ಕಾಶ್ಮೀರದಲ್ಲಿ ಭಾರತ ವಿರೋಧಿ ವಿಚಾರಗಳನ್ನು ಪ್ರಸರಣ ಮಾಡಲು ಈ ಇಬ್ಬರು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳುತ್ತಿದ್ದರು. ಉಗ್ರಗಾಮಿಗಳು ಹಾಗೂ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವ ಕಾರ್ಯದಲ್ಲಿ ತೊಡಗಿದ್ದರು. ಪಾಕಿಸ್ತಾನದ ಬೆಂಬಲದೊಂದಿಗೆ ಇವರು ಇಂಥ ಕೃತ್ಯದಲ್ಲಿ ತೊಡಗಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಎಸ್‌ಐಎ ಅಧಿಕಾರಿ ವಿವರಿಸಿದ್ದಾರೆ.
‘ಈ ರೀತಿಯ ದೇಶ ವಿರೋಧಿ ಚಟುವಟಿಕೆಗಳಿಗೆ ಈ ಇಬ್ಬರಿಗೆ ವಿದೇಶಗಳಲ್ಲಿನ ಕೆಲ ಸಂಸ್ಥೆಗಳು ಹಾಗೂ ನಿಷೇಧಿತ ಉಗ್ರ ಸಂಘಟನೆಗಳಿಂದ ಹಣಕಾಸು ನೆರವು ಹರಿದುಬರುತ್ತಿತ್ತು’ ಎಂದೂ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಎ ಕಳೆದ ವರ್ಷ ಅಕ್ಟೋಬರ್ 13ರಂದು ನ್ಯಾಯಾಲಯಕ್ಕೆ ವಿಶೇಷ ಚಾರ್ಜ್‌ಶೀಟ್ ಸಲ್ಲಿಸಿತ್ತು.
8 ಸ್ಥಳಗಳಲ್ಲಿ ಎಸ್‌ಐಎ ದಾಳಿ
ಶ್ರೀನಗರ: ದೇಶ ವಿರೋಧಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಹಣ ಸಂಗ್ರಹಣೆ ಹಾಗೂ ಆ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಜಮ್ಮು–ಕಾಶ್ಮೀರ ಪೊಲೀಸ್ ಇಲಾಖೆಯ ರಾಜ್ಯ ತನಿಖಾ ಸಂಸ್ಥೆಯು (ಎಸ್‌ಐಎ) ಎಂಟು ಸ್ಥಳಗಳಲ್ಲಿ ಶನಿವಾರ ಶೋಧ ನಡೆಸಿತು.
ಮೌಲ್ವಿ ಸರ್ಜಾನ್ ಬರ್ಕತಿ ಎಂಬಾತ ಹಣ ಸಂಗ್ರಹಿಸುತ್ತಿದ್ದ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ರೌಡ್‌ಫಂಡಿಂಗ್ ಮೂಲಕ ಹಾಗೂ ಶಂಕಿತ ಉಗ್ರರಿಂದ ₹ 1.5 ಕೋಟಿಗೂ ಅಧಿಕ ಹಣ ಸಂಗ್ರಹಿಸಿದ್ದ ಬರ್ಕತಿ, ಆ ಹಣವನ್ನು ಸ್ವಂತದ ಲಾಭಕ್ಕಾಗಿ ಬಳಸಿಕೊಂಡಿದ್ದ. ಜೊತೆಗೆ, ಪ್ರತ್ಯೇಕತಾವಾದಿ ಉಗ್ರರ ಪರ ಪ್ರಚಾರಕ್ಕೆ ಬಳಸಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.