ಜಮ್ಮು: ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದಿದ್ದ ಗುಲಾಂ ನಬಿ ಆಜಾದ್ ತಮ್ಮ ಹೊಸ ಪಕ್ಷದ ಹೆಸರು ಮತ್ತು ಬಾವುಟವನ್ನು ಸೋಮವಾರ ಅನಾವರಣಗೊಳಿಸಿದರು. ಪಕ್ಷಕ್ಕೆ 'ಡೆಮಾಕ್ರಟಿಕ್ ಆಜಾದ್ ಪಾರ್ಟಿ' ಎಂದು ಹೆಸರಿಟ್ಟಿರುವುದಾಗಿ ಅವರು ತಿಳಿಸಿದರು.
‘ನಮ್ಮ ಹೊಸ ಪಕ್ಷಕ್ಕೆ ಸುಮಾರು 1,500 ಹೆಸರುಗಳನ್ನು ಉರ್ದು, ಸಂಸ್ಕೃತದಲ್ಲಿ ನನಗೆ ಕಳುಹಿಸಲಾಗಿತ್ತು. 'ಹಿಂದೂಸ್ತಾನಿ' ಎಂಬುದು ಹಿಂದಿ ಮತ್ತು ಉರ್ದು ಮಿಶ್ರಣವಾಗಿದೆ. ಪಕ್ಷದ ಹೆಸರೂ ಕೂಡ ಪ್ರಜಾಸತ್ತಾತ್ಮಕ, ಶಾಂತಿಯುತ ಮತ್ತು ಸ್ವತಂತ್ರವಾಗಿರಬೇಕು ಎಂದು ನಾನು ಬಯಸುತ್ತೇನೆ. ಹಾಗಾಗಿಯೇ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಎಂದು ಇರಿಸಲಾಗಿದೆ‘ ಎಂದು ಅವರು ಹೇಳಿದರು.
ಆಜಾದ್ ಅವರು ಆಗಸ್ಟ್ 26 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
'ಡೆಮಾಕ್ರಟಿಕ್ ಆಜಾದ್ ಪಾರ್ಟಿ'ಯ ಧ್ಜಜವನ್ನೂ ಆಜಾದ್ ಅವರು ಇದೇ ವೇಳೆ ಅನಾವರಣ ಮಾಡಿದರು. ಬಾವುಟದಲ್ಲಿ ಹಳದಿ, ಬಿಳಿ ಮತ್ತು ನೀಲಿ ಬಣ್ಣ ಅಡ್ಡಪಟ್ಟಿಯಂತೆ ಹೊಂದಿಸಲಾಗಿದೆ.
‘ಹಳದಿ ಬಣ್ಣವು ಸೃಜನಶೀಲತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಸೂಚಿಸುತ್ತದೆ. ಬಿಳಿ ಶಾಂತಿಯನ್ನು ಸೂಚಿಸುತ್ತದೆ ಮತ್ತು ನೀಲಿ ಸ್ವಾತಂತ್ರ್ಯ, ಮುಕ್ತ ಪ್ರದೇಶದ (ಸಮುದ್ರದ ಆಳದಿಂದ ಆಕಾಶದ ಎತ್ತರದದವರೆಗಿನ ಮಿತಿ) ಕಲ್ಪನೆ ಹೊಂದಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.