ADVERTISEMENT

J&K Result Highlights: ಎನ್‌ಸಿ– ಕಾಂಗ್ರೆಸ್‌ ಮೈತ್ರಿಗೆ ಬಹುಮತ: ಒಮರ್ CM ಸಂಭವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2024, 14:04 IST
Last Updated 8 ಅಕ್ಟೋಬರ್ 2024, 14:04 IST
   

ಜಮ್ಮು ಮತ್ತು ಕಾಶ್ಮೀರದಲ್ಲಿ 90 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 49 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮೈಕೂತ್ರಿಕೂಟ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ. 

ಇದರಲ್ಲಿ ಎನ್‌ಸಿ 42 ಹಾಗೂ ಕಾಂಗ್ರೆಸ್‌ 6 ಹಾಗೂ ಮಿತ್ರ ಪಕ್ಷ ಸಿಪಿಎಂ 1 ಕ್ಷೇತ್ರಗಳಲ್ಲಿ ಗೆದ್ದು ಮ್ಯಾಜಿಕ್ ನಂಬರ್‌ 46 ಅನ್ನು ದಾಟಿದೆ. ಈ ಮೂಲಕ ಸರ್ಕಾರ ರಚನೆಗೆ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಕ್ಕಂತಾಗಿದೆ.

ಬಿಜೆಪಿ 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮೆಹಮೂಬಾ ಮುಫ್ತಿ ಅವರ ಪಿಡಿಪಿ ಪಕ್ಷ 3 ಕ್ಷೇತ್ರಗಳಲ್ಲಿ ಗೆದ್ದಿದೆ.

ADVERTISEMENT

ಒಮರ್‌ ಅಬ್ದುಲ್ಲಾ ಮುಂದಿನ ಸಿಎಂ

ಜಮ್ಮು ಮತ್ತು ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಮಂಗಳವಾರ ತಿಳಿಸಿದರು.

‘ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದರ ವಿರುದ್ಧವಾಗಿ ಜನರು ಇದ್ದಾರೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ’ ಎಂದು ಹೇಳಿದರು.

‘ಜನರು ತಮ್ಮ ತೀರ್ಪಿನ ಮೂಲಕ  2019 ಆಗಸ್ಟ್‌ 5ರಂದು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರ ತಪ್ಪು ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದು ಹೇಳಿದರು.

‘ಜನರ ಸಂಕಷ್ಟಗಳ ನಿವಾರಣೆಗೆ ಹೊಸ ಸರ್ಕಾರವು ಸಾಕಷ್ಟು ಕೆಲಸ ಮಾಡಬೇಕಿದೆ. ನಿರುದ್ಯೋಗವನ್ನು ಕೊನೆಗೊಳಿಸಬೇಕು. ಹಣದುಬ್ಬರ ಮತ್ತು ಮಾದಕವಸ್ತು ಜಾಲದ ಸಮಸ್ಯೆಯನ್ನು ಬಗೆಹರಿಸಬೇಕು. ಇನ್ಮುಂದೆ ಲೆಫ್ಟಿನೆಂಟ್‌ ಗವರ್ನರ್ ಮತ್ತು ಅವರ ಸಲಹೆಗಾರರು ಇರುವುದಿಲ್ಲ. 90 ಶಾಸಕರಿರುತ್ತಾರೆ’ ಎಂದು ಹೇಳಿದರು.

10 ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. 62 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಆ ಪೈಕಿ ಕೇವಲ 10 ಸ್ಥಾನಗಳಲ್ಲಿ ಗೆಲವು ಕಂಡ ಬಿಜೆಪಿ 19 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 

ಸ್ವತಂತ್ರ ಅಭ್ಯರ್ಥಿಗಳಿಗೆ ಗೆಲುವಿನ ಸಂಭ್ರಮ

ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇಂದರ್‌ವಾಲ್‌ ಕ್ಚೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಪಯಾರೆ ಲಾಲ್‌ ಶರ್ಮಾ ಅವರು ಹಿರಿಯ ನಾಯಕ ಗುಲಾಮ್‌ ಮೊಹಮ್ಮದ್‌ ಸರೋರಿ ಅವರನ್ನು ಹಿಂದಿಕ್ಕಿ 643 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.

ಬನಿ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಡಾ. ರಾಮೇಶ್ವರ ಸಿಂಗ್‌ ಅವರು ಬಿಜೆಪಿ ಅಭ್ಯರ್ಥಿ ಜೆವಾನ್‌ ಲಾಲ್‌ ಅವರನ್ನು 2,048 ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.

ಸುರನಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ನ್ಯಾಷನಲ್ ಕಾನ್ಫರೆನ್ಸ್‌ನ ಬಂಡಾಯ ಅಭ್ಯರ್ಥಿ ಚೌಧರಿ ಮೊಹಮ್ಮದ್‌ ಅಕ್ರಮ್‌ ಕಾಂಗ್ರೆಸ್‌ ಅಭ್ಯರ್ಥಿ ಮೊಹಮ್ಮದ್‌ ಶಾನ್ವಾಜ್‌ ಅವರನ್ನು 8,851 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ,

ಖಾತೆ ತೆರೆದ ಎಎಪಿ

ನವದೆಹಲಿ: ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿಯು ಜಮ್ಮು–ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಪಡೆಯುವ ಮೂಲಕ ರಾಜ್ಯದಲ್ಲಿ ಖಾತೆ ತೆರೆದಿದೆ.

ಈ ಹಿಂದೆ ಬಿಜೆಪಿ ತೆಕ್ಕೆಯಲ್ಲಿದ್ದ ದೋಡಾ ಕ್ಷೇತ್ರದಲ್ಲಿ ಎಎಪಿಯ ಮೆಹರಾಜ್‌ ಮಲ್ಲಿಕ್ ಅವರು ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಜಮ್ಮು–ಕಾಶ್ಮೀರವು ಎಎಪಿ ಶಾಸಕರಿರುವ ಐದನೇ ರಾಜ್ಯವಾಗಿದೆ. ಈಗಾಗಲೇ ದೆಹಲಿ. ಪಂಜಾಬ್‌, ಗುಜರಾತ್‌ ಮತ್ತು ಗೋವಾದಲ್ಲಿ ಎಎಪಿ ಶಾಸಕರನ್ನು ಹೊಂದಿದೆ. ಹರಿಯಾಣದಲ್ಲಿ ಸ್ಪರ್ಧಿಸಿರುವ ಎಲ್ಲ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿರುವ ಎಎಪಿಗೆ ಜಮ್ಮು–ಕಾಶ್ಮೀರದ ಒಂದು ಕಡೆ ಜಯಗಳಿಸಿರುವುದು ಸಂತಸವನ್ನುಂಟು ಮಾಡಿದೆ.

ಜಮ್ಮು– ಕಾಶ್ಮೀರ ಫಲಿತಾಂಶದಿಂದ ಕೇಂದ್ರ ಸರ್ಕಾರ ಪಾಠ ಕಲಿಯಲಿ

‘ಜಮ್ಮು–ಕಾಶ್ಮೀರ ವಿಧಾನಸಭೆ ಚುನಾವಣೆ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಾಠ ಕಲಿಯಬೇಕು. ನ್ಯಾಷನಲ್ ಕಾನ್ಫರೆನ್ಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಬಾರದು’ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದರು. ‘ಹಸ್ತಕ್ಷೇಪ ಮುಂದುವರಿಸಿದರೆ ಈಗ ಆಗಿದ್ದಕ್ಕಿಂತ ಹೆಚ್ಚಿನ ಮುಖಭಂಗ ಆಗಲಿದೆ’ ಎಂದು ಎಚ್ಚರಿಸಿದರು.

ಪ್ರತ್ಯೇಕತಾವಾದಿ ಅಭ್ಯರ್ಥಿಗಳಿಗೆ ಹೀನಾಯ ಸೋಲು

ಪ್ರತ್ಯೇಕತಾವಾದಿ ಅಭ್ಯರ್ಥಿಗಳನ್ನು  ಜಮ್ಮು ಮತ್ತು ಕಾಶ್ಮೀರ ಜನ ತಿರಸ್ಕರಿದ್ದಾರೆ. ಇದಕ್ಕೆ ಸಾಕ್ಷಿ ಅವಾಮಿ ಇತ್ತೆಹಾದ್‌ ಪಕ್ಷದ ಎಂಜಿನಿಯರ್‌ ರಶೀದ್‌ ಸಹೋದರ ಖುರ್ಶೀದ್‌ ಅಹಮದ್‌ ಶೇಖ್‌ ಮತ್ತು ಜಮಾತ್‌–ಇ–ಇಸ್ಲಾಮಿ ಪಕ್ಷದ ಸಯ್ಯರ್‌ ಅಹ್ಮದ್‌ ರೇಶಿ ಹೀನಾಯವಾಗಿ ಸೋಲು ಕಂಡಿರುವುದು.

ಕುಲ್ಗಾಮ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ರೇಶಿ ಮತ್ತು ಲ್ಯಾಂಗೇಟ್‌ನಿಂದ ಸ್ಪರ್ಧಿಸಿದ್ದ ಖುರ್ಶೀದ್‌ ಅಹಮದ್‌ ಶೇಖ್‌ ಸೋಲನುಭವಿಸಿದ್ದಾರೆ.

ಕಿಶ್ತ್‌ವಾರ್‌ನಲ್ಲಿ ಬಿಜೆಪಿ ಮಹಿಳಾ ಅಭ್ಯರ್ಥಿಗೆ ಗೆಲುವು; ಭದ್ರತೆಗೆ ಬದ್ಧ ಎಂದ ಶಾಗುನ್‌

ಕಿಶ್ತ್‌ವಾರ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಶಾಗುನ್‌ ಪರಿಹಾರ್‌ ಗೆಲುವು ಸಾಧಿಸಿದ್ದು, ತಮ್ಮ ಪ್ರದೇಶದ ಭದ್ರತೆಗಾಗಿ ಹೋರಾಟ ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. 

ಬಿಜೆಪಿ ಗೆದ್ದ 27 ಕ್ಷೇತ್ರಗಳಲ್ಲಿ ಪರಿಹಾರ್‌ ಅವರು ಕೂಡ ಸೇರಿದ್ದಾರೆ. 

ನ್ಯಾಷನಲ್‌ ಕಾನ್ಫರೆನ್ಸ್‌ನ ಹಿರಿಯ ನಾಯಕ ಮತ್ತು ಮಾಜಿ ಸಚಿವ ಸಾಜಿದ್‌ ಅಹ್ಮದ್‌ ಕಿಚ್ಲೂ ಅವರ ವಿರುದ್ಧ ಪರಿಹಾರ ಗೆದ್ದು ಬೀಗಿದ್ದಾರೆ.

ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕಿಳಿದ ಕಾಂಗ್ರೆಸ್‌ನ ವೈಯಕ್ತಿಕ ಪ್ರದರ್ಶನ

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ವೈಯಕ್ತಿಕ ಪ್ರದರ್ಶನವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಕಾಂಗ್ರೆಸ್‌ ಸ್ಪರ್ಧಿಸಿದ್ದ 29 ಕ್ಷೇತ್ರಗಳಲ್ಲಿ ಕೇವಲ ಒಂದು ಕ್ಷೇತ್ರದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇಬ್ಬರು ಕಾರ್ಯಾಧ್ಯಕ್ಷರು ಸೇರಿದಂತೆ ಕಾಂಗ್ರೆಸ್‌ನ ಪ್ರಮುಖರು ಸೋಲು ಕಂಡಿದ್ದಾರೆ.

ಬಿಜೆಪಿಗೆ ಈವರೆಗಿನ ಅತ್ಯಧಿಕ ಸ್ಥಾನ– ಅಮಿತ್‌ ಶಾ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಜನತೆ ಬಿಜೆಪಿಗೆ ಅತ್ಯಧಿಕ ಮತಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಬಿಜೆಪಿಗೆ ಇದುವರೆಗಿನ ಇತಿಹಾಸದಲ್ಲೇ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲು ನೆರವಾಗಿದ್ದಾರೆ. ಇದಕ್ಕಾಗಿ ನಾನು ಜಮ್ಮು ಮತ್ತು ಕಾಶ್ಮೀರದ ಜನತೆಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅಲ್ಲದೆ, ಎಲ್ಲಾ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ’ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆ.

ವಿರೋಧ ಪಕ್ಷದಲ್ಲಿ ಪಿಡಿಇ: ಮುಫ್ತಿ

ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಇರಲಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಹೇಳಿದ್ದಾರೆ.

ಸರ್ಕಾರ ರಚಿಸಲು ಮೈತ್ರಿಕೂಟ ಸಜ್ಜು

ಮ್ಯಾಜಿಕ್‌ ನಂಬರ್‌ 46 ಅನ್ನು ದಾಟಿದ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟ 49 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ. 

ರಜೌರಿಯ ನೌಶೇರಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಜಮ್ಮು ಕಾಶ್ಮೀರ ಬಿಜೆಪಿ ಮುಖ್ಯಸ್ಥ ರವೀಂದರ್‌ ರೈನಾ ಅವರು ಎನ್‌ಸಿ ಅಭ್ಯರ್ಥಿ ಸುರೀಂದರ್‌ ಚೌಧರಿ ಎದುರು 7 ಸಾವಿರ ಮತಗಳ ಅಂತರದಿಂದ ಸೋಲುಕಂಡಿದ್ದಾರೆ.

ಎನ್‌ಸಿ ಇಬ್ಬರು ಮಹಿಳೆಯರು ಸೇರಿ 9 ಹಿಂದು ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿತ್ತು. ಆದರೆ ಅವರಲ್ಲಿ ಇಬ್ಬರು ಮಾತ್ರ ಜಯಗಳಿಸಿದ್ದಾರೆ. ಇತ್ತ ಕಾಂಗ್ರೆಸ್‌ 19 ಹಿಂದು, ಇಬ್ಬರು ಸಿಖ್‌ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿತ್ತು. ಆದರೆ ಇವರಲ್ಲಿ ಯಾರೊಬ್ಬರೂ ಗೆಲ್ಲಲಿಲ್ಲ.

ಬಿಜೆಪಿ ಉತ್ತಮ ಸಾಧನೆ: ಪ್ರಧಾನಿ ಮೋದಿ

ಜಮ್ಮು ಮತ್ತು ಕಾಶ್ಮೀರ ಜನತೆಗೆ ಈ ಚುನಾವಣೆ ವಿಶೇಷವಾಗಿದೆ. ಅತಿ ಹೆಚ್ಚು ಜನರು ಮತದಾನದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಖುಷಿಯ ವಿಚಾರ. ಬಿಜೆಪಿ ಜಮ್ಮು ಕಾಶ್ಮೀರದಲ್ಲಿ ಉತ್ತಮ ಸಾಧನೆ ಮಾಡಿದೆ. ನಮ್ಮ ಪಕ್ಷದ ಮೇಲೆ ನಂಬಿಕೆಯಿಟ್ಟು ಮತ ಹಾಕಿದ್ದಕ್ಕೆ ಧನ್ಯವಾದಗಳು. ಜನರ ಸೇವೆಗೆ ಪಕ್ಷ ಸದಾ ಸಿದ್ಧ ಎಂದು ಎಕ್ಸ್‌ನಲ್ಲಿ ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.