ಶ್ರೀನಗರ: ಶ್ರೀನಗರ ಮತ್ತು ಬಂಡಿಪೊರಾ ಪ್ರದೇಶದಲ್ಲಿ 48 ತಾಸುಗಳಲ್ಲಿ ಉಗ್ರರು ಮೂವರು ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಅವರಲ್ಲಿ ಇಬ್ಬರು ಸರ್ಕಾರಿ ಶಾಲೆಯ ಶಿಕ್ಷಕರು. ಸತೀಂದರ್ ಕೌರ್ ಮತ್ತು ದೀಪಕ್ ಚಂದ್ ಅವರ ಮೇಲೆ ಗುರುವಾರ ಬೆಳಿಗ್ಗೆ 11.15ರ ಹೊತ್ತಿಗೆ ಗುಂಡು ಹಾರಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆ ತಲುಪುವ ಮೊದಲೇ ಮೃತಪಟ್ಟರು.
ಕಾಶ್ಮೀರ ಕಣಿವೆಯಲ್ಲಿ ಕಳೆದ ಐದು ದಿನಗಳಲ್ಲಿ ಏಳು ಮಂದಿಯನ್ನು ಉಗ್ರರು ಗುಂಡಿಟ್ಟು ಕೊಂದಿದ್ದಾರೆ.
ಶ್ರೀನಗರದಲ್ಲಿ ಔಷಧ ಅಂಗಡಿ ನಡೆಸುತ್ತಿದ್ದ ಮಖನ್ ಲಾಲ್ ಬಿಂದ್ರೂ ಅವರನ್ನು ಮಂಗಳವಾರ ಸಂಜೆ ಗುಂಡಿಟ್ಟು ಕೊಲ್ಲಲಾಗಿದೆ. ಔಷಧ ಅಂಗಡಿಯ ಒಳಗೆ ಹತ್ತಿರದಿಂದ ಗುಂಡು ಹಾರಿಸಿ ಅವರ ಹತ್ಯೆ ಮಾಡಲಾಗಿದೆ. ಅದಾಗಿ, ಒಂದು ತಾಸಿನ ಬಳಿಕ ಬಿಹಾರದ ಬೀದಿಬದಿ ವ್ಯಾಪಾರಿ ಒಬ್ಬರನ್ನು ಲಾಲ್ ಬಝಾರ್ ಪ್ರದೇಶದಲ್ಲಿ ಕೊಲ್ಲಲಾಗಿದೆ. ಅದೇ ದಿನ ಬಂಡಿಪೊರಾ ಜಿಲ್ಲೆಯಲ್ಲಿಯೂ ಒಬ್ಬ ನಾಗರಿಕರ ಹತ್ಯೆ ಆಗಿದೆ.
‘ಕಾಶ್ಮೀರದ ಮುಸ್ಲಿಮರ ಹೆಸರು ಕೆಡಿಸುವುದು ಉಗ್ರರ ಉದ್ದೇಶ. ಕಾಶ್ಮೀರದಲ್ಲಿ ಬಹಳ ಹಿಂದಿನಿಂದಲೂ ಕೋಮು ಸಾಮರಸ್ಯ ಮತ್ತು ಸಹೋದರತ್ವ ಇದೆ. ಶಿಕ್ಷಕರು ಸೇರಿ ಮುಗ್ಧ ನಾಗರಿಕರ ಹತ್ಯೆಯ ಮೂಲಕ ಇಲ್ಲಿನ ಸಾಮರಸ್ಯ ಕದಡಲು ಉಗ್ರರು ಮುಂದಾಗಿದ್ದಾರೆ’ ಎಂದು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್‌ಬಾಗ್ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.