ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿರುವ ಅಂತರರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ದಾಳಿ ನಡೆಸುವ ಮೂಲಕ ಪಾಕಿಸ್ತಾನಿ ಸೇನೆ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ಈ ವೇಳೆ ಕೆಲವು ದೇವಸ್ಥಾನ ಮತ್ತು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.
ಪೂಂಚ್ ಮತ್ತು ಕಥುವಾ ಜಿಲ್ಲೆಗಳ ಅಂತರರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯ ಹಲವು ವಲಯಗಳಲ್ಲಿ ಪಾಕಿಸ್ತಾನ ಅಪ್ರಚೋದಿತ ಮೋಟಾರ್ ಶೆಲ್ಲಿಂಗ್ ದಾಳಿ ನಡೆಸಿದೆ. ಗಡಿ ಭದ್ರತಾ ಪಡೆಯು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಯಾವುದೇ ಪ್ರಾಣಹಾನಿಯ ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ದಾಳಿಯಲ್ಲಿ ಕಥುವಾ ಜಿಲ್ಲೆಯ ಮನ್ಯಾರಿ, ಚಂಡ್ವಾ ಮತ್ತು ಲಾಂಡಿ ಗ್ರಾಮದ ಶಿವ ದೇವಾಲಯ ಮತ್ತು ಮನೆಗಳಿಗೆ ಹಾನಿಯಾಗಿವೆ. ಅಲ್ಲದೇ ಇದರಲ್ಲಿ ಕೆಲ ಜಾನುವಾರುಗಳಿಗೂ ಗಾಯಗಳಾಗಿವೆ. ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಶನಿವಾರ ರಾತ್ರಿ 9.45 ಸುಮಾರಿಗೆ ಗುಂಡಿನ ಚಕಮಕಿ ಆರಂಭವಾಗಿದ್ದು, ಭಾನುವಾರ ಬೆಳಿಗ್ಗೆಯೂ ಮುಂದುವರಿದಿತ್ತು. ಇದರಿಂದಾಗಿ ಸ್ಥಳೀಯ ನಿವಾಸಿಗಳು ಭೂಗತ ಬಂಕರ್‌ಗಳಲ್ಲಿ ರಾತ್ರಿ ಕಳೆಯಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದರು.
ಪಾಕಿಸ್ತಾನಿ ಸೇನೆಯು ಶಹಪುರ್, ಕಿರ್ನಿ ಮತ್ತು ಕಸ್ಬಾ ಸೆಕ್ಟರ್‌ಗಳ ಗಡಿ ನಿಯಂತ್ರಣ ರೇಖೆ ಬಳಿಯೂ ಶೆಲ್, ಮೋಟಾರ್ ಮತ್ತು ಗುಂಡಿನ ದಾಳಿ ನಡೆಸಿದೆ ಎಂದು ರಕ್ಷಣಾ ವಕ್ತಾರರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.