ಜಮ್ಮು (ಪಿಟಿಐ): ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ‘ಭಯೋತ್ಪಾದಕ’ನೆಂದು ಜಮ್ಮು ವಿಶ್ವವಿದ್ಯಾಲಯದ ಪ್ರೊಫೆಸರ್ ಮೊಹಮ್ಮದ್ ತಾಜುದ್ದೀನ್ ಹೇಳಿದ್ದು, ಇದು ಈಗ ವಿವಾದದ ಕಿಡಿ ಹೊತ್ತಿಸಿದೆ. ಪ್ರೊಫೆಸರ್ ವಿರುದ್ಧ ಜಮ್ಮು ವಿಶ್ವವಿದ್ಯಾಲಯ ತನಿಖೆಗೆ ಆದೇಶಿಸಿದೆ.
ರಾಜಕೀಯ ವಿಜ್ಞಾನ ವಿಭಾಗದಲ್ಲಿ ಗುರುವಾರ ಉಪನ್ಯಾಸ ನೀಡುವಾಗ ಅವರು ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಯನ್ನು ಭಯೋತ್ಪಾದಕ ಎಂದಿರುವುದಾಗಿ ಆರೋಪಿಸಿ ವಿ.ವಿಯ ವಿದ್ಯಾರ್ಥಿಗಳು ಕುಲಪತಿಗೆ ದೂರು ನೀಡಿದ್ದಾರೆ.
ತಕ್ಷಣ ಕ್ರಮ ತೆಗೆದುಕೊಂಡಿರುವ ವಿ.ವಿ ಕುಲಪತಿ ಪ್ರೊ.ಮನೋಜ್ ಕೆ. ಧಾರ್ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದು, ತನಿಖಾ ವರದಿ ಬರುವವರೆಗೆ ಆರೋಪಿತ ಪ್ರೊ. ತಾಜುದ್ದೀನ್ ವಿ.ವಿಯಲ್ಲಿ ಬೋಧನೆ ಮಾಡದಂತೆ ಸೂಚಿಸಿದ್ದಾರೆ.
‘ರಾಜಕೀಯ ವಿಜ್ಞಾನ ವಿಭಾಗದ ಕೆಲವು ವಿದ್ಯಾರ್ಥಿಗಳು ಗುರುವಾರ ಸಂಜೆ ಕುಲಪತಿಯನ್ನು ಭೇಟಿ ಮಾಡಿ, ಈ ಬಗ್ಗೆ ದೂರು ನೀಡಿದ್ದಾರೆ. ಘಟನೆ ಬಗ್ಗೆ ಸಿಡಿ ಮತ್ತು ಕೆಲವು ದಾಖಲೆಗಳನ್ನು ಕೊಟ್ಟಿದ್ದಾರೆ’ ಎಂದು ವಿಶ್ವವಿದ್ಯಾಲಯದ ವಕ್ತಾರ ಡಾ.ವಿನಯ್ ತುಸೂ ತಿಳಿಸಿದ್ದಾರೆ.
‘ತನಿಖೆಗೆ ವಿ.ವಿಯ ಶೈಕ್ಷಣಿಕ ವಿಷಯಗಳ ವಿಭಾಗದ ಡೀನ್ ಪ್ರೊ.ಕೇಶಿವ್ ಶರ್ಮಾ ಅವರ ನೇತೃತ್ವದಲ್ಲಿಆರು ಮಂದಿಯ ಸಮಿತಿ ರಚಿಸಲಾಗಿದೆ. ಏಳು ದಿನಗಳ ಒಳಗೆ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರೊ.ಮೊಹಮ್ಮದ್ ತಾಜುದ್ದೀನ್ ಸುಮಾರು 2 ಗಂಟೆ ನೀಡಿದ ಉಪನ್ಯಾಸದಲ್ಲಿ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ಉಲ್ಲೇಖಿಸಿರುವ 25 ಸೆಕೆಂಡ್‌ಗಳ ವಿಡಿಯೊ ತುಣುಕನ್ನು ಕುಲಪತಿಗೆ ನೀಡಿದ ದೂರಿನ ಜತೆಗೆ ಸಲ್ಲಿಸಿರುವ ವಿದ್ಯಾರ್ಥಿಗಳು, ತಾಜುದ್ದೀನ್ ಅವರ ಅಮಾನತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.