ADVERTISEMENT

ಆಂಧ್ರ ವಿಧಾನಸಭೆ ಚುನಾವಣೆ: ಟಿಡಿಪಿ ಜೊತೆ ಮೈತ್ರಿ ಘೋಷಿಸಿದ ಪವನ್‌ಕಲ್ಯಾಣ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಸೆಪ್ಟೆಂಬರ್ 2023, 9:50 IST
Last Updated 14 ಸೆಪ್ಟೆಂಬರ್ 2023, 9:50 IST
   

ಹೈದರಾಬಾದ್: ಮುಂದಿನ ವರ್ಷ ಆಂಧ್ರಪ್ರದೇಶ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಜನ ಸೇನಾ ಪಕ್ಷದ ನಾಯಕ ಹಾಗೂ ಚಿತ್ರನಟ ಪವನ್‌ ಕಲ್ಯಾಣ್‌ ಗುರುವಾರ ಘೋಷಿಸಿದ್ದಾರೆ.

ಟಿಡಿಪಿ, ಬಿಜೆಪಿ ಹಾಗೂ ಜನ ಸೇನಾ ಒಳಗೊಂಡ ‘ಮಹಾ ಮೈತ್ರಿ’ ರಚಿಸಿ, ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ವಿರುದ್ಧ ಹೋರಾಡಬೇಕು ಎಂದು ಕೆಲ ವರ್ಷಗಳಿಂದ ಪವನ್‌ ಕಲ್ಯಾಣ್‌ ಹೇಳುತ್ತಲೇ ಇದ್ದರು. ‘ಮಹಾಮೈತ್ರಿ’ ಮಾಡಿಕೊಳ್ಳುವ ಕುರಿತ ಪವನ್‌ ಕಲ್ಯಾಣ್‌ ಪ್ರಸ್ತಾವಕ್ಕೆ ಈ ಹಿಂದೆ ಬಿಜೆಪಿ ಉತ್ಸಾಹ ತೋರಿರಲಿಲ್ಲ. ಈಗ, ಬಿಜೆಪಿಯ ಪ್ರತಿಕ್ರಿಯೆಗೆ ಕಾಯದೇ, ನಟ ಪವನ್‌ ಕಲ್ಯಾಣ್‌ ಅವರು ತಮ್ಮ ಚುನಾವಣಾ ನಡೆಯನ್ನು ಪ್ರಕಟಿಸಿದ್ದಾರೆ. ಚೆಂಡು ಈಗ ಬಿಜೆಪಿ ಅಂಗಳದಲ್ಲಿ ಬಿದ್ದಿದ್ದು, ಕುತೂಹಲ ಕೆರಳಿಸಿದೆ.

ಭ್ರಷ್ಟಾಚಾರ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಟಿಡಿಪಿ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು ಅವರನ್ನು ಸದ್ಯ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಜೈಲಿನಲ್ಲಿರುವ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ನಂತರ, ಪವನ್‌ಕಲ್ಯಾಣ್‌ ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ADVERTISEMENT

ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ನಾಯ್ಡು ಪುತ್ರ ಹಾಗೂ ಹಿಂದೂಪುರ ಶಾಸಕ ನಾರಾ ಲೋಕೇಶ್‌, ಚಿತ್ರನಟ ನಂದಮೂರಿ ಬಾಲಕೃಷ್ಣ  ಇದ್ದರು. 

ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪವನ್‌ ಕಲ್ಯಾಣ್‌, ‘ಮುಂದಿನ ವರ್ಷ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ನಮ್ಮ ಮೈತ್ರಿಯ ಭಾಗವಾಗಲಿದೆ ಎಂಬ ಭರವಸೆ ಇದೆ’ ಎಂದು ಹೇಳಿದರು.

‘ಆಂಧ್ರಪ್ರದೇಶದ ಭವಿಷ್ಯ ಹಾಗೂ ರಾಜಕಾರಣದ ದೃಷ್ಟಿಯಿಂದ ರಾಜಮಹೇಂದ್ರವರಂನಲ್ಲಿ ನಡೆದ ಈ ಭೇಟಿ ಮಹತ್ವದ್ದು ಹಾಗೂ ನಿರ್ಣಾಯಕವೂ ಆಗಿದೆ. ಇನ್ನು ಮುಂದೆ ರಾಜ್ಯವು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ವಿರುದ್ಧ ಜಂಟಿ ಹೋರಾಟದ ಅಗತ್ಯದ ಬಗ್ಗೆ ನಾನು ಇಲ್ಲಿಯವರೆಗೆ ಮಾತನಾಡುತ್ತಿದ್ದೆ. ಈ ದಿನ ನಾಯ್ಡು ಅವರನ್ನು ಭೇಟಿ ಮಾಡಿದ ನಂತರ, ಮುಂದಿನ ವರ್ಷ ನಡೆಯುವ ಚುನಾವಣೆಗೆ ಟಿಡಿಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ದೃಢ ನಿರ್ಧಾರ ಮಾಡಿದೆ’ ಎಂದು ಹೇಳಿದರು.

‘ಚಂದ್ರಬಾಬು ನಾಯ್ಡು ಅವರ ಬಂಧನ ಕಾನೂನುಬಾಹಿರ. ನಾಯ್ಡು ಅಂಥವರನ್ನೇ ಬಂಧಿಸುತ್ತಿರುವಾಗ, ಆಂಧ್ರಪ್ರದೇಶದಲ್ಲಿ ಯಾರಿಗೆ ಏನೂ ಬೇಕಾದರೂ ಆಗಬಹುದು’ ಎಂದು ಆಡಳಿತಾರೂಢ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

‘ಮೈತ್ರಿಯ ಮುಂದಿನ ನಡೆ ಕುರಿತು ಚರ್ಚಿಸಲು ಜಂಟಿ ಕ್ರಿಯಾ ಸಮಿತಿಯೊಂದನ್ನು ರಚಿಸಲಾಗುವುದು. ಆಂಧ್ರಪ್ರದೇಶದಲ್ಲಿ ಈಗ ಅರಾಜಕತೆಯೇ ಮನೆ ಮಾಡಿದೆ. ಇದರ ವಿರುದ್ಧ ಈಗ ನಾವು ಜಂಟಿ ಹೋರಾಟ ಆರಂಭಿಸದಿದ್ದರೆ ಈ ಅರಾಜಕತೆ ದಶಕಗಳ ಕಾಲ ಮುಂದುವರಿಯುವ ಅಪಾಯ ಇದೆ’ ಎಂದರು.

‘ಚಂದ್ರಬಾಬು ನಾಯ್ಡು ಅವರೊಂದಿಗೆ ನನಗೆ ಯಾವುದೇ ಮನಸ್ತಾಪ ಇಲ್ಲ. ಕೆಲ ನೀತಿಗಳಿಗೆ ಸಂಬಂಧಿಸಿ ಈ ಹಿಂದೆ ಅವರೊಂದಿಗೆ ನಾನು ಭಿನ್ನಾಭಿಪ್ರಾಯ ಹೊಂದಿದ್ದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವೈಎಸ್‌ಆರ್‌ಸಿಪಿ ಪ್ರತಿಕ್ರಿಯೆ: ಈ ಬೆಳವಣಿಗೆ ಬಗ್ಗೆ ಅಚ್ಚರಿಪಡುವಂಥದ್ದು ಏನೂ ಇಲ್ಲ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಪ್ರತಿಕ್ರಿಯಿಸಿದೆ.

‘ಅವರಿಬ್ಬರು ಕೆಲ ವರ್ಷಗಳಿಂದ ಗುಟ್ಟಾಗಿಯೇ ಕೈಜೋಡಿಸಿದ್ದರು. ಈಗ ತಮ್ಮ ಮುಖವಾಡಗಳನ್ನು ಕಳಚಿದ್ದಾರಷ್ಟೆ’ ಎಂದು ವಿಜಯವಾಡ ಪಶ್ಚಿಮ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ವೆಲ್ಲಂಪಲ್ಲಿ ಶ್ರೀನಿವಾಸ ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.