ADVERTISEMENT

ರಾಮಮಂದಿರ ಉದ್ಘಾಟನೆ| ಇತಿಹಾಸದಲ್ಲಿ ಈ ದಿನ ದೈವತ್ವ ಮೆರೆಯುವ ಕ್ಷಣವಾಗಲಿದೆ: ಧನಕರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2024, 9:31 IST
Last Updated 22 ಜನವರಿ 2024, 9:31 IST
<div class="paragraphs"><p>ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಂಪನ್ನವಾದ ಕ್ಷಣ</p></div>

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಂಪನ್ನವಾದ ಕ್ಷಣ

   

ನವದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿದೆ. ಇತಿಹಾಸಲ್ಲಿ ಈ ದಿನ (ಜನವರಿ 22) ದೈವತ್ವ ಮೆರೆಯುವ ಕ್ಷಣವಾಗಿರುತ್ತದೆ ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಬಣ್ಣಿಸಿದ್ದಾರೆ.

‘ರಾಷ್ಟ್ರೀಯ ಹೆಮ್ಮೆಯ ಪುನರುಜ್ಜೀವನವನ್ನು ಗುರುತಿಸುವ ಸಂಭ್ರಮಾಚರಣೆಯ ಕ್ಷಣವನ್ನು ವೀಕ್ಷಿಸಲು ಸಂತೋಷವಾಗಿದೆ. ಈ ದಿನವನ್ನು (ಜನವರಿ 22) ನಮ್ಮ ನಾಗರಿಕತೆಯ ಪಥದಲ್ಲಿ ‘ದೈವತ್ವವನ್ನು ಮೆರೆಯುವ ಕ್ಷಣ’ ಕ್ಷಣವೆಂದು ಇತಿಹಾಸದ ಪುಟದಲ್ಲಿ ದಾಖಲಾಗುತ್ತದೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

‘ಈ ಪವಿತ್ರ ದಿನದಂದು ಶ್ರೀರಾಮನ ಪ್ರಾಮಾಣಿಕತೆ, ನಮ್ರತೆ, ಕಾಳಜಿ ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಜೀವನದ ಮಾರ್ಗವಾಗಿ ಜ್ಞಾನೋದಯ, ಶಾಂತಿ, ಸಾಮರಸ್ಯ ಮತ್ತು ಸದಾಚಾರವನ್ನು ಪಸರಿಸಲು ಸಂಕಲ್ಪ ಮಾಡೋಣ’ ಎಂದು ಧನಕರ್ ಬರೆದುಕೊಂಡಿದ್ದಾರೆ.

ಅಯೋಧ್ಯೆಯಲ್ಲಿ ಅರ್ಚಕರು, ಪಂಡಿತರು, ಸಂತರ ಸಮ್ಮುಖದಲ್ಲಿ ಬಾಲರಾಮನ ಪಟ್ಟಾಭಿಷೇಕದ ವಿಧಿವಿಧಾನಗಳನ್ನು ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಶಯ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ವಿಧಿವಿಧಾನಗಳನ್ನು ನೆರವೇರಿಸಿದ ಪ್ರಧಾನಿ ಮೋದಿ ಅವರು ರಾಮನ ಪಾದಗಳಿಗೆ ಪುಷ್ಪ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಆರ್‌ಎಸ್‌ಎಸ್‌ ಮುಖಂಡ ಮೋಹನ್‌ ಭಾಗವತ್‌ ಅವರೊಂದಿಗೆ ಸೇರಿ ಆರತಿ ಬೆಳಗಿದರು. ಈ ವೇಳೆ ದೇವಾಲಯದ ಒಳಗೆ ನೆರೆದವರ ಶ್ರೀರಾಮ ಜಯರಾಮ ಎಂಬ ರಾಮನಾಮ ಮುಗಿಲುಮುಟ್ಟಿತ್ತು. ಮಂತ್ರಘೋಷಗಳು ಮೊಳಗಿದ್ದವು, ವಾದ್ಯಗಳ ನಾದ ದೇವಾಲಯವನ್ನು ಆವರಿಸಿತ್ತು.

ಈ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಗುಜರಾತ್ ಮಾಜಿ ಸಿಎಂ ಆನಂದಿ ಬೇನ್ ಪಟೇಲ್, ಇಬ್ಬರು ಪ್ರಧಾನ ಅರ್ಚಕರು ಗರ್ಭಗುಡಿಯಲ್ಲಿದ್ದರು.

ಮೋದಿಯವರ ಸಮ್ಮುಖದಲ್ಲಿ ಬಾಲರಾಮನ ವಿಗ್ರಹವನ್ನು ಅನಾವರಣಗೊಳಿಸುತ್ತಿದ್ದಂತೆ ಭಾರತೀಯ ವಾಯುಪಡೆ (ಐಎಎಫ್) ಹೆಲಿಕಾಪ್ಟರ್‌ಗಳು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಾಲಯದ ಮೇಲೆ ಹೂವಿನ ಮಳೆಗೈದವು.

ಕನ್ನಡಿಗ ಅರುಣ್‌ ಯೋಗಿರಾಜ್‌ ಕೆತ್ತಿದ ಬಾಲರಾಮನ ಮೂರ್ತಿ ಇಂದು ಅಯೋಧ್ಯೆಯಲ್ಲಿ ಸ್ಥಾಪನೆಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.