ADVERTISEMENT

ಮರಾಠ ಮೀಸಲಾತಿಗೆ ಆಗ್ರಹ: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಜರಾಂಗೆ

ಪಿಟಿಐ
Published 16 ಸೆಪ್ಟೆಂಬರ್ 2024, 14:37 IST
Last Updated 16 ಸೆಪ್ಟೆಂಬರ್ 2024, 14:37 IST
<div class="paragraphs"><p>ಮನೋಜ್‌ ಜರಾಂಗೆ&nbsp;</p></div>

ಮನೋಜ್‌ ಜರಾಂಗೆ 

   

ಜಲ್ನಾ: ಮರಾಠ ಸಮುದಾಯಕ್ಕೆ ಒಬಿಸಿ ಅಡಿ ಮೀಸಲಾತಿಗೆ ಒತ್ತಾಯಿಸಿ ಮಹಾರಾಷ್ಟ್ರದ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಇಂದು ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದಾರೆ.

ಜಲ್ನಾ ಜಿಲ್ಲೆಯ ಅಂತರ್ವಾಲಿ ಸಾರಥಿ ಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮರಾಠರನ್ನು ಕುಂಬಿಗಳು (ಕೃಷಿ ಸಮುದಾಯ) ಎಂದು ಗುರುತಿಸಿದ್ದ ಹಿಂದಿನ ಹೈದರಾಬಾದ್ ರಾಜ್ಯ, ಬಾಂಬೆ ಪ್ರೆಸಿಡೆನ್ಸಿ ಮತ್ತು ಸತಾರಾ ಸಂಸ್ಥಾನದ ಐತಿಹಾಸಿಕ ಗೆಜೆಟ್‌ಗಳ ಮಾದರಿಗಳನ್ನು ಅನುಸರಿಸುವಂತೆ ಒತ್ತಾಯಿಸಿದರು.

ADVERTISEMENT

‘ಈ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾವಿನವರೆಗೆ ಉಪವಾಸ ಮಾಡುವುದನ್ನು ಬಿಟ್ಟು ಬೇರೆ ಆಯ್ಕೆ ಇಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದ ಅಭ್ಯರ್ಥಿಗಳು ಸೋಲಿಸುವುದನ್ನು ಬಿಟ್ಟರೆ ಬೇರೆ ನಮಗೆ ಮಾರ್ಗ ಇಲ್ಲ’ಎಂದಿದ್ದಾರೆ.

ಇದೇವೇಳೆ, ಡಿಸಿಎಂ ದೇವೇಂದ್ರ ಫಡಣವೀಸ್ ಮತ್ತು ಸಚಿವ ಛಗನ್ ಭುಜಬಲ್ ವಿರುದ್ಧ ಮತ್ತೆ ಕಿಡಿಕಾರಿದ ಜರಾಂಗೆ, ‘ಮರಾಠ ಸಮುದಾಯಕ್ಕೆ ಮೀಸಲಾತಿಗೆ ಕಲ್ಪಿಸುವುದಕ್ಕೆ ಫಡಣವೀಸ್ ತೊಡಕಾಗಿದ್ದಾರೆ. ಒಬಿಸಿ ಸಮುದಾಯದ ಜನರನ್ನು ಮರಾಠ ಮೀಸಲಾತಿ ವಿರುದ್ಧ ಎತ್ತಿಕಟ್ಟುವ ಮೂಲಕ ಛಗನ್ ಭುಜಬಲ್ ಗಲಭೆ ಸೃಷ್ಟಿಸುತ್ತಿದ್ದಾರೆ’ಎಂದರು.

ಎಸ್‌ಟಿ ಪ್ರವರ್ಗಕ್ಕೆ ಸೇರಿಸಬೇಕೆಂದು ಒತ್ತಾಯಿಸುತ್ತಿರುವ ಧನಗರ್ ಸಮುದಾಯವನ್ನು ಜರಾಂಗೆ ಬೆಂಬಲಿಸಿದ್ದಾರೆ.

ಮರಾಠರಿಗೆ ಮೀಸಲಾತಿಗೆ ಒತ್ತಾಯಿಸಿ ಕಳೆದ ವರ್ಷ ಆಗಸ್ಟ್ 29 ಮತ್ತು ಅಕ್ಟೋಬರ್ 25ರಂದು ಜರಾಂಗೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ವರ್ಷ ಫೆಬ್ರುವರಿ 10, ಜೂನ್ 4 ಮತ್ತು ಜುಲೈ 20ರಂದೂ ಧರಣಿ ನಡೆಸಿದ್ದರು.

ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮರಾಠ ಸಮುದಾಯಕ್ಕೆ ಶೇಕಡ 10ರಷ್ಟು ಮೀಸಲಾತಿ ಕಲ್ಪಿಸಬೇಕೆಂಬುದು ಜರಾಂಗೆಯವರ ಪ್ರಮುಖ ಬೇಡಿಕೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವುದು ಅವರ ಉದ್ದೇಶವಾಗಿದೆ ಎಂದು ವರದಿ ತಿಳಿಸಿದೆ.

ಉಪವಾಸದ ಹೆಸರಲ್ಲಿ ಜರಾಂಗೆ ನಾಟಕ ಮಾಡುತ್ತಿದ್ದಾರೆ ಎಂದು ಮತ್ತೊಬ್ಬ ಹೋರಾಟಗಾರ ವಾಘ್ಮರೆ ಆರೋಪಿಸಿದ್ದಾರೆ.

ಒಬಿಸಿ ಅಡಿ ಮರಾಠರಿಗೆ ಮೀಸಲಾತಿ ನೀಡುವುದಕ್ಕೆ ವಾಘ್ಮರೆ ಮತ್ತು ಜರಾಂಗೆ ಸಹವರ್ತಿಯೇ ಆಗಿರುವ ಲಕ್ಷ್ಮಣ್ ಹಕೆ ವಿರೋಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.