ಮುಂಬೈ: ‘ಎಲ್ಲವನ್ನೂ ಹಾಗೂ ಎಲ್ಲರನ್ನೂ ಒಳಗೊಳ್ಳುವ ಹಿಂದೂಗಳು ಇರುವುದರಿಂದಲೇ ಭಾರತದಲ್ಲಿ ಇಂದಿಗೂ ಪ್ರಜಾಪ್ರಭುತ್ವ ಉಳಿದಿದೆ’ ಎಂದು ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ ಠಾಕ್ರೆ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದರ ವಿಡಿಯೊ ತುಣುಕು ಈಗ ಎಕ್ಸ್ ವೇದಿಕೆಯಲ್ಲಿ ಹರಿದಾಡುತ್ತಿದೆ.
‘ಜಗತ್ತಿನಲ್ಲಿ ಇಂದು ಅಸಹಿಷ್ಣುತೆ ಹೆಚ್ಚಾಗಿದೆ. ಆದರೆ ಭಾರತದಲ್ಲಿ ಮಾತ್ರ ಎಲ್ಲಾ ಧರ್ಮ, ಜಾತಿಯ ಜನರು ಒಂದಾಗಿ ಬದುಕುತ್ತಿದ್ದಾರೆ. ಈ ಕೂಡುಬಾಳುವ ಸಂಸ್ಕೃತಿ ನಮಗೆ ಬಂದಿದ್ದೇ ಹಿಂದೂ ಧರ್ಮದಿಂದ. ಹಿಂದೂ ಎನ್ನುವುದು ಕೇವಲ ಒಂದು ಧರ್ಮವಲ್ಲ. ಅದು ಈ ನೆಲದ ಸಂಸ್ಕೃತಿಯೂ ಹೌದು’ ಎಂದಿದ್ದಾರೆ.
‘ಮೂರ್ತಿ ಪೂಜೆ ಮಾಡಿದರೂ ಹಿಂದೂ, ಪ್ರಕೃತಿ ಪೂಜಿಸಿದರೂ ಹಿಂದೂ, ದೇವನೊಬ್ಬ ಎಂದರೂ ಹಿಂದೂ, ದೇವನಿಲ್ಲ ಎಂದರೂ ಹಿಂದೂ, ಮುಕ್ಕೋಟಿ ದೇವರನ್ನು ಪೂಜಿಸಿದರೂ ಹಿಂದೂ... ಹೀಗಾಗಿಯೇ ಎಲ್ಲರನ್ನೂ ಮತ್ತು ಎಲ್ಲವನ್ನೂ ಒಳಗೊಳ್ಳುವ ಸಹಿಷ್ಣುತೆ ಹಿಂದೂ ಧರ್ಮಕ್ಕಿದೆ. ಹಿಂದೂ ಧರ್ಮ ನನ್ನ ಮೇಲೂ ಪ್ರಭಾವ ಬೀರಿದೆ. ಈ ಧರ್ಮದಿಂದಲೇ ಭಾರತದಲ್ಲಿ ಈವರೆಗೂ ಪ್ರಜಾಪ್ರಭುತ್ವ ಉಳಿದಿದೆ. ಭವಿಷ್ಯದಲ್ಲಿ ಗೊತ್ತಿಲ್ಲ’ ಎಂದು ಅಖ್ತರ್ ಹೇಳಿದ್ದಾರೆ.
‘ಭಗವಾನ್ ರಾಮ ಹಾಗೂ ಸೀತಾ ಅವರಿದ್ದ ನೆಲದಲ್ಲಿ ಜನಿಸಿದ್ದೇ ನನ್ನ ಪುಣ್ಯ. ಅವರು ಕೇವಲ ಹಿಂದೂ ದೇವರು ಮಾತ್ರವಲ್ಲ, ಈ ನೆಲದ, ಪರಂಪರೆಯ ಸ್ವರೂಪ’ ಎಂದು ಹೇಳಿದ ಅಖ್ತರ್, ಜೈ ಶ್ರೀರಾಮ್ ಮಂತ್ರವನ್ನು ಜಪಿಸಿ, ಸಭಿಕರಿಗೂ ಜಪಿಸಲು ಹೇಳಿದರು.
ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರೂ ಈ ಕಾರ್ಯಕ್ರಮದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.