ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕುರಿತಾದ ‘ಮಲ್ಟಿಮೀಡಿಯಾ ಡಿಜಿಟಲ್ ಆರ್ಕೈವ್’ ಮುಂದಿನ ವರ್ಷದ ನವೆಂಬರ್‌ನಲ್ಲಿ ಅನಾವರಣಗೊಳ್ಳಲಿದೆ. ನೆಹರೂ ಅವರ ಅಪ್ರಕಟಿತ ಬರಹಗಳೂ ಸೇರಿದಂತೆ ಇಲ್ಲಿಯವರೆಗೆ ದೊರೆಯದ ಕೆಲ ಅಮೂಲ್ಯ ದಾಖಲೆಗಳು ಇದರಲ್ಲಿ ಲಭ್ಯವಾಗಲಿವೆ.
ನೆಹರೂ ಅವರ 135ನೇ ಜನ್ಮದಿನದ ಮುನ್ನಾದಿನವಾದ ಬುಧವಾರ ಜವಾಹರಲಾಲ್ ನೆಹರೂ ಸ್ಮಾರಕ ನಿಧಿಯು (ಜೆಎನ್‌ಎಂಎಫ್) ‘ದಿ ನೆಹರೂ ಆರ್ಕೈವ್’ ಕುರಿತು ಪ್ರಕಟಿಸಿದೆ. ಮುಂದಿನ ವರ್ಷ ನೆಹರೂ ಅವರ 136ನೇ ಜನ್ಮದಿನದಿಂದ (ನವೆಂಬರ್ 14) ಆನ್‌ಲೈನ್ ಆರ್ಕೈವ್ ಆದ nehruarchive.in ಬಳಕೆದಾರರಿಗೆ ಲಭ್ಯವಾಗುತ್ತದೆ ಎಂದು ಅದು ತಿಳಿಸಿದೆ.
ನೆಹರೂ ಅವರ ಬರಹ ಮತ್ತು ಭಾಷಣಗಳು ಒಂದೇ ವೇದಿಕೆಯಲ್ಲಿ ದೊರೆಯಲಿದೆ. ನೆಹರೂ ಅವರ ಕುರಿತ ಪ್ರಾಥಮಿಕ ದಾಖಲೆಗಳು ಸುಲಭವಾಗಿ ಸಂಶೋಧಕರು ಮತ್ತು ಜನ ಸಾಮಾನ್ಯರಿಗೆ ದೊರೆಯುವಂತಾಗಲಿ ಎಂಬುದು ಇದರ ಹಿಂದಿನ ಉದ್ದೇಶ ಎಂದು ಅದು ಹೇಳಿದೆ.
‘ದಿ ಸೆಲೆಕ್ಟೆಡ್ ವರ್ಕ್ಸ್ ಆಫ್ ಜವಾಹರಲಾಲ್ ನೆಹರೂ’ದ 100 ಸಂಪುಟಗಳು, 1947ರಿಂದ 1964ರವರೆಗೆ ಅವರು ದೇಶದ ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳು ಮತ್ತು ‘ಲೆಟರ್ಸ್ ಫ್ರಮ್ ಎ ಫಾದರ್ ಟು ಡಾಟರ್’, ‘ಗ್ಲಿಂಪ್ಸೆಸ್ ಆಫ್ ವರ್ಲ್ಡ್ ಹಿಸ್ಟರಿ, ಎನ್ ಆಟೊಬಯೋಗ್ರಫಿ’, ‘ದಿ ಯೂನಿಟಿ ಆಫ್ ಇಂಡಿಯಾ’, ‘ದಿ ಡಿಸ್ಕವರಿ ಆಫ್ ಇಂಡಿಯಾ’, ‘ಎ ಬಂಚ್ ಆಫ್ ಓಲ್ಡ್ ಲೆಟರ್ಸ್’ ಸೇರಿದಂತೆ ಅವರ ಪುಸ್ತಕಗಳು ಹಾಗೂ ಇತರ ಬರಹಗಳು ಇಲ್ಲಿ ಸುಲಭವಾಗಿ ದೊರೆಯುತ್ತವೆ.
ವಿಲ್ಸನ್ ಸೆಂಟರ್ ಆರ್ಕೈವ್ಸ್, ವಿನ್‌ಸ್ಟನ್ ಚರ್ಚಿಲ್, ನೆಲ್ಸನ್ ಮಂಡೇಲಾ, ಜಾನ್ ಎಫ್ ಕೆನಡಿ ಅವರ ಆರ್ಕೈವ್‌ಗಳ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತದೆ. 1917ರಿಂದ 1964ರವರೆಗೆ ನೆಹರೂ ಅವರ ಭಾಷಣಗಳು, ಅವರ ಸಮಕಾಲೀನರು ನೆಹರೂ ಬಗ್ಗೆ ಬರೆದ ಬರಹಗಳು, ಜಾಗತಿಕ ಅರ್ಕೈವ್‌ಗಳಲ್ಲಿ ನೆಹರೂ ಅವರಿಗೆ ಸಂಬಂಧಿಸಿದಂತೆ ಲಭ್ಯವಿರುವ ವಿಷಯಗಳೂ ನೆಹರೂ ಆರ್ಕೈವ್‌ನಲ್ಲಿ ಲಭ್ಯವಾಗಲಿವೆ.
‘ಹೊಸ ಆರ್ಕೈವ್ ಅನ್ನು ನಿರಂತರವಾಗಿ ನವೀಕರಿಸಲಾಗುತ್ತದೆ. ನೆಹರೂ ಅವರ ಬಗ್ಗೆಗಿನ ಸಂಶೋಧನೆ ಮತ್ತು ಅಧ್ಯಯನಕ್ಕೆ ಇದು ಪ್ರಮುಖ ಮತ್ತು ಏಕೈಕ ಮೂಲವಾಗಿರಬೇಕು ಎಂದು ನಾವು ಬಯಸುತ್ತೇವೆ. ಹೀಗಾಗಿ ನೆಹರೂ ಅವರ ಕುರಿತ ಪ್ರಾಥಮಿಕ ದಾಖಲೆಗಳು ಇಲ್ಲಿ ಲಭ್ಯವಾಗುವಂತೆ ಮಾಡಲಾಗುವುದು’ ಎಂದು ಜೆಎನ್‌ಎಂಎಫ್ ಕಾರ್ಯದರ್ಶಿ ಪ್ರೊ. ಮಾಧವನ್ ಕೆ ಪಲಟ್ ವಿವರಿಸಿದ್ದಾರೆ.
‘ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಆದರೆ ಇದು ಬೌದ್ಧಿಕ ಮತ್ತು ಐತಿಹಾಸಿಕವಾದದ್ದು’ ಎಂದಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಜೆಎನ್‌ಎಂಎಫ್ ಟ್ರಸ್ಟಿ ಜೈರಾಮ್ ರಮೇಶ್, ‘ನೆಹರೂ ಅವರ ಬಗ್ಗೆ ಬಳಕೆದಾರರಿಗೆ ಇಲ್ಲಿ ಸುಲಭವಾಗಿ ಮಾಹಿತಿ ದೊರೆಯುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು’ ಎಂದಿದ್ದಾರೆ.
ರಷ್ಯನ್, ಜರ್ಮನ್, ಅರೇಬಿಕ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಪ್ರಕಟವಾಗಿರುವ ನೆಹರೂ ಅವರ ಸಂದರ್ಶನಗಳನ್ನು ಈಗಾಗಲೇ ಸಂಗ್ರಹಿಸಿರುವ ಜೆಎನ್‌ಎಂಎಫ್, ಅವುಗಳನ್ನು ಇಂಗ್ಲಿಷ್ ಮತ್ತು ಹಿಂದಿಗೆ ಭಾಷಾಂತರಿಸಿದೆ. ಜಪಾನಿ ಭಾಷೆಯಲ್ಲಿರುವ ದಾಖಲೆಗಳನ್ನು ಭಾಷಾಂತರಿಸುವ ಕಾರ್ಯ ನಡೆಯುತ್ತಿದೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಜೆಎನ್‌ಎಂಎಫ್ 14 ಟ್ರಸ್ಟಿಗಳನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.