ADVERTISEMENT

ಜಯಲಲಿತಾ ಆಸ್ತಿ ಹರಾಜು ಬೇಡ: ಬೆಂಗಳೂರು ನ್ಯಾಯಾಲಯ

ಜಯಲಲಿತಾರ ಒಡವೆ, ದುಬಾರಿ ವಸ್ತುಗಳ ಸುಪರ್ದಿ ಕುರಿತ ಮೇಲ್ಮನವಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 21:34 IST
Last Updated 22 ಜನವರಿ 2024, 21:34 IST
ಜಯಲಲಿತಾ
ಜಯಲಲಿತಾ   

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಸಿಎಂ ಜೆ.ಜಯಲಲಿತಾ ಅವರಿಂದ ಜಪ್ತಿ ಮಾಡಲಾದ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಹರಾಜು ಹಾಕುವ ಬದಲು ತಮಿಳುನಾಡು ಸರ್ಕಾರದ ಸುಪರ್ದಿಗೆ ನೀಡುವಂತೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಆರ್‌ಟಿಐ ಕಾರ್ಯಕರ್ತ ಟಿ.ನರಸಿಂಹ ಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ, ಜಯಲಲಿತಾ ಅವರ ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಕರ್ನಾಟಕದ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಪೊಲೀಸ್‌ ಇಲಾಖೆಗೆ ನಿರ್ದೇಶಿಸಿದೆ.

ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಗಾಗಿ ವೆಚ್ಚವಾಗಿರುವ ₹5 ಕೋಟಿ ಮೊತ್ತವನ್ನು ಡಿಡಿ ರೂಪದಲ್ಲಿ ಕರ್ನಾಟಕ ಸರ್ಕಾರಕ್ಕೆ ಪಾವತಿಸುವಂತೆಯೂ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.

ADVERTISEMENT

ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರಾಸಿಕ್ಯೂಟರ್‌ ಆದ ಹಿರಿಯ ವಕೀಲ ಕಿರಣ್ ಎಸ್.ಜವಳಿ, ಜಪ್ತಿಯಾದ ಜಯಲಲಿತಾ ಅವರ ಆಸ್ತಿ-ವಸ್ತುಗಳ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅದನ್ನು ಪರಿಗಣಿಸಿದ ನ್ಯಾಯಾಲಯ ಈ ಆದೇಶ ಮಾಡಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ  2014ರ ಸೆ.27ರಂದು ಜಯಲಲಿತಾಗೆ ನಾಲ್ಕು ವರ್ಷ ಜೈಲು ಮತ್ತು ₹ 100 ಕೋಟಿ ದಂಡ ವಿಧಿಸಿ ಆದೇಶಿಸಿತ್ತು. ಜತೆಗೆ, ‘ಜಪ್ತಿ ಮಾಡಲಾದ ಜಯಲಲಿತಾ ಅವರ ಬೆಲೆಬಾಳುವ ವಸ್ತುಗಳನ್ನು ಆರ್‌ಬಿಐ, ಎಸ್‌ಬಿಐಗೆ ಅಥವಾ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಬೇಕು. ಅದರಿಂದ ಬಂದ ಹಣವನ್ನು ದಂಡದ ಮೊತ್ತಕ್ಕೆ ಹೊಂದಾಣಿಕೆ ಮಾಡಬೇಕು’ ಎಂದು ನಿರ್ದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.