ADVERTISEMENT

ಜೆಇಇ ಪರೀಕ್ಷೆ: ಮುಂದಿನ ವರ್ಷದ ವೇಳಾಪಟ್ಟಿ ಇಂದು ಸಂಜೆ ಪ್ರಕಟ

ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್‌ ‘ನಿಶಾಂಕ್‌‘

ಪಿಟಿಐ
Published 16 ಡಿಸೆಂಬರ್ 2020, 10:12 IST
Last Updated 16 ಡಿಸೆಂಬರ್ 2020, 10:12 IST
ರಮೇಶ್ ಪೋಖ್ರಿಯಾಲ್ ನಿಶಾಂಕ್
ರಮೇಶ್ ಪೋಖ್ರಿಯಾಲ್ ನಿಶಾಂಕ್   

ನವದೆಹಲಿ: ಮುಂದಿನ ವರ್ಷದ ಜೆಇಇ– ಪರೀಕ್ಷೆ (ಮುಖ್ಯ) ಕುರಿತು ಬಂದಿರುವಂತಹ ಸಲಹೆಗಳನ್ನು ಪರಿಶೀಲಿಸಿರುವ ಶಿಕ್ಷಣ ಸಚಿವಾಲಯ, ಇಂದು (ಬುಧವಾರ) 2021ರ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಿದೆ ಎಂದು ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್‌ ‘ನಿಶಾಂಕ್‌‘ ತಿಳಿಸಿದ್ದಾರೆ.

ಕಳೆದ ವಾರ ವಿದ್ಯಾರ್ಥಿಗಳೊಂದಿಗೆ ನಡೆದ ಆನ್‌ಲೈನ್ ಸಂವಾದದಲ್ಲಿ ಸಚಿವರು ‘ಮುಂದಿನ ವರ್ಷದಿಂದ ಸರ್ಕಾರ ಪ್ರತಿ ವರ್ಷ ಮೂರು ಅಥವಾ ನಾಲ್ಕು ಬಾರಿ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ನಡೆಸುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸುತ್ತಿದೆ. 2021ರಲ್ಲಿ ನಡೆಯುವ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಕೇಳಬಹುದಾದ ಪ್ರಶ್ನೆಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಸ್ತಾವವನ್ನು ಪರಿಶೀಲಿಸಲಾಗುತ್ತಿದೆ‘ ಎಂದು ಹೇಳಿದ್ದರು.

’ಜೆಇಇ (ಮುಖ್ಯ) ಪರೀಕ್ಷೆಗಳಿಗೆ ಸಂಬಂಧಿಸಿದಂತೆ ನಿಮ್ಮ ರಚನಾತ್ಮಕ ಸಲಹೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಸಲಹೆಗಳನ್ನು ನಾವು ಪರಿಶೀಲಿಸಿದ್ದೇವೆ. ಇಂದು (ಬುಧವಾರ) ಸಂಜೆ 6 ಗಂಟೆಗೆ ವೇಳಾಪಟ್ಟಿ ಪ್ರಕಟಿಸುತ್ತೇವೆ. ಆ ಪ್ರಕಟಣೆಯಲ್ಲಿ ವರ್ಷಕ್ಕೆ ಎಷ್ಟು ಬಾರಿ ಪರೀಕ್ಷೆ ನಡೆಯಲಿದೆ ಎಂಬ ಅಂಶವೂ ಇರಲಿದೆ‘ ಎಂದು ನಿಶಾಂಕ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಮುಂದಿನ ವರ್ಷ ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್‘ ಅಥವಾ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ (ಮುಖ್ಯ) ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆಗಳಿಲ್ಲ‘ ಎಂದು ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

‘10 ಮತ್ತು 12 ನೇ ತರಗತಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ, ಮಂಡಳಿ ನಡೆಸುವ ಪರೀಕ್ಷೆಗಳ ದಿನಾಂಕಗಳನ್ನು ನಿರ್ಧರಿಸಲು ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೇ ವೇಳಾಪಟ್ಟಿ ಘೋಷಿಸಲಾಗುವುದು‘ ಎಂದು ಸಚಿವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.