ADVERTISEMENT

ಕುಲ್ಗಾಂ ಎನ್‌ಕೌಂಟರ್: ಪೊಲೀಸ್ ಹುತಾತ್ಮ, ಐವರಿಗೆ ಗಾಯ, ಉಗ್ರನ ಹತ್ಯೆ

ಪಿಟಿಐ
Published 13 ಜನವರಿ 2022, 6:21 IST
Last Updated 13 ಜನವರಿ 2022, 6:21 IST
   

ಶ್ರೀನಗರ:ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಜೈಶೆ–ಮೊಹಮ್ಮದ್‌(ಜೆಇಎಂ) ಉಗ್ರ ಹತ್ಯೆಯಾಗಿದ್ದು, ಪೊಲೀಸ್‌ ಕಾನ್‌ಸ್ಟೆಬಲ್‌ವೊಬ್ಬರು ಹುತಾತ್ಮರಾಗಿದ್ದಾರೆ. ಮೂವರು ಯೋಧರು ಸೇರಿ ಐವರು ಗಾಯಗೊಂಡಿದ್ದಾರೆ.

‘ಹತ್ಯೆಯಾದ ಉಗ್ರನನ್ನು ಬಾಬರ್‌ ಭಾಯ್‌ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನಕ್ಕೆ ಸೇರಿದವನಾಗಿದ್ದಾನೆ. ಈತ 2018ರಿಂದ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ. ಹತ್ಯೆಯಾದ ಉಗ್ರನಿಂದ ಒಂದು ಪಿಸ್ತೂಲ್‌ ಹಾಗೂ ಎರಡು ಗ್ರೆನೆಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಇಲ್ಲಿನ ಪರಿವಾನ್‌ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಉಗ್ರನಿಂದ ಮನೆಯನ್ನು ಸುತ್ತುವರೆದಿದ್ದ ಭದ್ರತಾ ಪಡೆಗಳ ಮೇಲೆ ಉಗ್ರ ಗುಂಡಿನ ದಾಳಿ ನಡೆಸಿದ. ಭದ್ರತಾ ಪಡೆಗಳ ಪ್ರತಿದಾಳಿಗೆ ಉಗ್ರ ಹತನಾದನು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ರೋಹಿತ್‌ ಹುತಾತ್ಮರಾದರು. ಅಲ್ಲದೇ ಸೇನೆಯ ಮೂವರು ಯೋಧರು ಹಾಗೂ ಇಬ್ಬರು ನಾಗರಿಕರು ಗಾಯಗೊಂಡರು. ಗಾಯಗೊಂಡವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್‌ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.