ADVERTISEMENT

ಆಸ್ಪತ್ರೆಯಲ್ಲಿ ಬೆಂಕಿ ಅವಘಡ | 10 ಮಕ್ಕಳ ಸಾವು; ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ

ಪಿಟಿಐ
Published 16 ನವೆಂಬರ್ 2024, 5:30 IST
Last Updated 16 ನವೆಂಬರ್ 2024, 5:30 IST
<div class="paragraphs"><p>ಅಗ್ನಿ ಅವಘಡ</p></div>

ಅಗ್ನಿ ಅವಘಡ

   

ಝಾನ್ಸಿ(ಉತ್ತರ ಪ್ರದೇಶ): ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನವಜಾತ ಶಿಶುಗಳ ತೀವ್ರನಿಗಾ ಘಟಕದಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 10 ಮಕ್ಕಳು ಮೃತ ಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.

‘ರಾತ್ರಿ 10.45ರ ವೇಳೆಗೆ ಬೆಂಕಿ ಅವಘಡ ಸಂಭವಿಸಿತು. 37 ಮಕ್ಕಳನ್ನು ರಕ್ಷಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ’ ಎಂದು ಜಿಲ್ಲಾಧಿಕಾರಿ ಅವಿನಾಶ್‌ ಕುಮಾರ್ ಹೇಳಿದ್ದಾರೆ.

ADVERTISEMENT

‘ಶಾರ್ಟ್‌ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಈ ಕುರಿತು ತನಿಖೆ ನಡೆಸುವುದಕ್ಕಾಗಿ ಸಮಿತಿ ರಚಿಸಲಾಗಿದೆ’ ಎಂದೂ ಹೇಳಿದ್ದಾರೆ.

ದುರಂತದಲ್ಲಿ ಮಕ್ಕಳು ಮೃತ ಪಟ್ಟಿರುವ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಸುಟ್ಟು ಕರಕಲಾದ ದೇಹಗಳಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಜೀವ ರಕ್ಷಿಸಿಕೊಳ್ಳಲು ಅಲ್ಲಿದ್ದವರು ಪ್ರಯತ್ನಿಸಿದ ಕಾರಣ, ಆಸ್ಪತ್ರೆಯಲ್ಲಿ ಕಾಲ್ತುಳಿತದಂತಹ ಸನ್ನಿವೇಶ ನಿರ್ಮಾಣ ವಾಗಿತ್ತು. ವಾರ್ಡ್‌ನಲ್ಲಿ ದಟ್ಟ ಹೊಗೆ ತುಂಬಿತ್ತು. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ, ಕಿಟಕಿ ಗಾಜುಗಳನ್ನು ಒಡೆದು ರೋಗಿಗಳನ್ನು ಪಾರು ಮಾಡಲು ಪ್ರಯತ್ನಿಸಿದರು.

ರೋಗಿಗಳು ಹಾಗೂ ಅವರ ಆರೈಕೆ ಮಾಡುವವರು ಆತಂಕಕ್ಕೆ ಒಳಗಾಗಿರುವುದು, ಪೊಲೀಸರು ಅವರ ರಕ್ಷಣೆಗೆ ಪ್ರಯತ್ನಿಸುತ್ತಿದ್ದರು ಎನ್ನಲಾದ ದೃಶ್ಯಗಳಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಜಿಲ್ಲಾಡಳಿತ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಕೈಗೊಂಡಿದ್ದರು.

ಮೃತ ಮಕ್ಕಳ ತಂದೆ ತಾಯಿಗೆ ತಲಾ 5 ಲಕ್ಷ ಪರಿಹಾರವನ್ನು ಉತ್ತರಪ್ರದೇಶ ಸರ್ಕಾರ ಶನಿವಾರ ಬೆಳಗ್ಗೆ ಘೋಷಣೆ ಮಾಡಿದೆ. ಗಾಯಗೊಂಡ ಮಕ್ಕಳಿಗೆ ಚಿಕಿತ್ಸೆ ವೆಚ್ಚ ಹಾಗೂ ತಲಾ ₹50 ಸಾವಿರ ಪರಿಹಾರ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಹೃದಯ ವಿದ್ರಾವಕ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.