ಲಖನೌ: ಝಾನ್ಸಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಬೆಂಕಿ ಅವಘಡದ ಪರಿಣಾಮ ಮೃತಪಟ್ಟ ಶಿಶುಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಮೂಲಗಳ ಪ್ರಕಾರ, ಗಾಯಗೊಂಡ ಶಿಶುಗಳ ಪೈಕಿ ಒಂದು ಶಿಶು ಭಾನುವಾರ ಮೃತಪಟ್ಟರೆ, ಮತ್ತೊಂದು ಸೋಮವಾರ ಮೃತಪಟ್ಟಿದೆ.
ಆದರೆ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ, ಭಾನುವಾರ ಮೃತಪಟ್ಟ ಶಿಶು ಗಂಭೀರ ಕಾಯಿಲೆಯಿಂದ ಬಳಲುತ್ತಿತ್ತು. ಆ ಶಿಶುವಿಗೆ ಯಾವುದೇ ಸುಟ್ಟ ಗಾಯಗಳು ಇರಲಿಲ್ಲ ಎಂದು ಹೇಳಿದೆ.
ಘಟನೆಯ ಬಗ್ಗೆ ಪ್ರತ್ಯೇಕವಾಗಿ ಮೂರು ತನಿಖೆ ನಡೆಸುವಂತೆ ಉತ್ತರ ಪ್ರದೇಶ ಸರ್ಕಾರ ಆದೇಶಿಸಿತ್ತು. ತನಿಖೆಗಾಗಿ ರಚನೆಯಾಗಿದ್ದ ಉನ್ನತ ಮಟ್ಟದ ಸಮಿತಿಯು ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಆರಂಭಿಸಿದೆ.
ಅವಘಡ ಸಂಭವಿಸಿದಾಗ ಮಕ್ಕಳ ವಾರ್ಡ್‌ನಲ್ಲಿ 55 ಶಿಶುಗಳು ಚಿಕಿತ್ಸೆ ಪಡೆಯುತ್ತಿದ್ದವು ಎಂದು ವರದಿಯಾಗಿತ್ತು. ಆದರೆ 49 ಶಿಶುಗಳು ಮಾತ್ರ ದಾಖಲಾಗಿದ್ದವು ಎಂದು ಆಸ್ಪತ್ರೆಯ ಆಡಳಿತ ವಿಭಾಗ ಸ್ಪಷ್ಟನೆ ನೀಡಿದೆ.
ಗಾಯಗೊಂಡಿರುವ 18 ಮಕ್ಕಳಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇತರ 9 ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಸ್ಪತ್ರೆಯಲ್ಲಿ ನಡೆದ ಅಗ್ನಿ ಅವಘಡಕ್ಕೆ ಸ್ವಿಚ್‌ಬೋರ್ಡ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಕಾರಣ. ಈ ಅವಘಡದಲ್ಲಿ ಯಾವುದೇ ಪೂರ್ವ ನಿಯೋಜಿತ ಸಂಚು ಇಲ್ಲ ಎಂದು ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರವು ರಚನೆ ಮಾಡಿದ್ದ ನಾಲ್ವರು ಸದಸ್ಯರ ಸಮಿತಿಯು ತಿಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಬುಂದೇಲ್‌ಖಂಡ ಪ್ರದೇಶದಲ್ಲಿರುವ, ರಾಜ್ಯದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾದ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿನ ‘ನವಜಾತ ಶಿಶುಗಳ ತೀವ್ರ ನಿಗಾ ಘಟಕ’ದಲ್ಲಿ (ಎನ್ಐಸಿಯು) ಶುಕ್ರವಾರ ರಾತ್ರಿ 10.45ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಅವಘಡದಲ್ಲಿ 10 ಶಿಶುಗಳು ಸಾವಿಗೀಡಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.