ಮೇದಿನಿನಗರ (ಜಾರ್ಖಂಡ್): ದಾಹ ತೀರಿಸಿಕೊಳ್ಳಲು ನೀರು ಕುಡಿಯಲು ಹೋಗಿದ್ದ 32 ಕೋತಿಗಳು ಬಾವಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ಪಲಾಮು ಜಿಲ್ಲೆಯಲ್ಲಿ ನಡೆದಿದ್ದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಪಂಕಿ ಬ್ಲಾಕ್‌ನ ಸೋರಟ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಭಾನುವಾರ ಕೋತಿಗಳ ಶವಗಳು ಪತ್ತೆಯಾಗಿವೆ. ಆದರೆ ಘಟನೆ ನಡೆದ ದಿನ ಯಾವುದೆಂದು ಇನ್ನಷ್ಟೇ ತಿಳಿಯಬೇಕಾಗಿದೆ.
‘ಸೋರಟ್‌ನ ನೀರಾವರಿ ಬಾವಿಯಲ್ಲಿ ಒಟ್ಟು 32 ಮಂಗಗಳ ಶವ ಪತ್ತೆಯಾಗಿದೆ. ಶವಗಳನ್ನು ಹೊರತೆಗೆಯಲಾಗಿದೆ’ ಎಂದು ಮೇದಿನಿನಗರ ವಿಭಾಗೀಯ ಅರಣ್ಯ ಅಧಿಕಾರಿ ಕುಮಾರ್ ಆಶಿಶ್ ತಿಳಿಸಿದ್ದಾರೆ.
ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಸಿಗಾಳಿ ಬೀಸುತ್ತಿದ್ದು, ತಾಪಮಾನ 44–45 ಡಿಗ್ರಿ ದಾಖಲಾಗುತ್ತಿದೆ.
‘ಘಟನೆ ನಡೆದ ಪ್ರದೇಶದಲ್ಲಿ ನೀರಿನ ಮೂಲಗಳು ಬಹುತೇಕ ಬತ್ತಿಹೋಗಿವೆ. ದಾಹ ಇಂಗಿಸಿಕೊಳ್ಳಲು ಕಾಡು ಮೃಗಗಳು ನೀರನ್ನು ಅರಸಿ ನಾಡಿಗೆ ಬರುತ್ತಿವೆ. ನೀರು ಕುಡಿಯಲು ಇಳಿದ ವೇಳೆ ಈ ಕೋತಿಗಳು ಮುಳುಗಿರಬಹುದು’ ಎಂದು ಆಶಿಶ್ ಹೇಳಿದ್ದಾರೆ.
ಕೋತಿಗಳು ಮೃತಪಟ್ಟ ಬಾವಿಯಲ್ಲಿ ಪುಷ್ಕಳ ನೀರಿತ್ತು. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ ಎಂದು ಅವರು ಹೇಳಿದರು.
ಕೆಲ ದಿನಗಳ ಹಿಂದೆ ನೀರನ್ನು ಅರಸಿಕೊಂಡು ಬಂದ ಮೂರು ನರಿಗಳು ಚೈನ್‌ಪುರ ಕಾಡಿನಲ್ಲಿ ಮೃತಪಟ್ಟಿದ್ದವು.
ಕಳೆದ ವಾರ ಶಾಖಾಘಾತದಿಂದ ಜಾರ್ಖಂಡ್‌ನಲ್ಲಿ 4 ಮಂದಿ ಮೃತಪಟ್ಟಿದ್ದಾರೆ. 1,326 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.