ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೇರಿದರೆ, ಜನರಿಗೆ ಈಗ ನಿಡುತ್ತಿರುವ 5 ಕೆ.ಜಿ. ಪಡಿತರವನ್ನು 7 ಕೆ.ಜಿ.ಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಭಾನುವಾರ ಭರವಸೆ ನೀಡಿದ್ದಾರೆ.
ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ 11 ಲಕ್ಷ ಪಡಿತರ ಕಾರ್ಡ್‌ಗಳು ಮತ್ತು ಮೂರು ಲಕ್ಷ ಜನರಿಗೆ ಪಿಂಚಣಿ ರದ್ದುಪಡಿಸಲಾಯಿತು. ಇದು ಸಾಕಷ್ಟು ದಲಿತರು, ಬುಡಕಟ್ಟು ಸಮುದಾಯದವರು ಹಸಿವಿನಿಂದ ಸಾಯುವಂತೆ ಮಾಡಿತು ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸೊರೇನ್, 'ಬಿಜೆಪಿ ಆಡಳಿತದಲ್ಲಿ ಹಸಿವಿನಿಂದ ಸಾವು ಸಂಭವಿಸುವುದು ಸಾಮಾನ್ಯವಾಗಿತ್ತು. ಆದರೆ, ನಿಮ್ಮ (ನಮ್ಮ) ಸರ್ಕಾರದ ಅವಧಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಹಕ್ಕಿನಂತೆ ಪಡಿತರ, ಪಿಂಚಿಣಿ, ಪೌಷ್ಠಿಕ ಆಹಾರವನ್ನು ಪಡೆಯುತ್ತಿದ್ದೀರಿ. ಈ ಬಗ್ಗೆ ನನಗೆ ಹೆಮ್ಮೆ ಇದೆ' ಎಂದು ಹೇಳಿಕೊಂಡಿದ್ದಾರೆ.
'ಸರ್ಕಾರ ರಚನೆಯಾದ ತಕ್ಷಣ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ 5 ಕೆ.ಜಿ. ಬದಲು 7 ಕೆ.ಜಿ ಧಾನ್ಯಗಳನ್ನು ವಿತರಿಸಲಾಗುವುದು. ಪಿಂಚಣಿ ಮೊತ್ತವನ್ನೂ ಏರಿಕೆ ಮಾಡಲಾಗುವುದು' ಎಂದು ತಿಳಿಸಿದ್ದಾರೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 23ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.