ADVERTISEMENT

ಸಿಎಂ ಸೊರೇನ್ ಎದುರು ಸ್ಪರ್ಧಿಸಲು ಬಿಜೆಪಿಯಲ್ಲಿ ಅಭ್ಯರ್ಥಿಗಳೇ ಇಲ್ಲ: ಜೆಎಂಎಂ ನಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2024, 9:54 IST
Last Updated 27 ಅಕ್ಟೋಬರ್ 2024, 9:54 IST
<div class="paragraphs"><p>ಮುಖ್ಯಮಂತ್ರಿ ಹೇಮಂತ್‌ ಸೊರೇನ್‌</p></div>

ಮುಖ್ಯಮಂತ್ರಿ ಹೇಮಂತ್‌ ಸೊರೇನ್‌

   

ರಾಂಚಿ (ಜಾರ್ಖಂಡ್‌): ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರ ಎದುರು ಕಣಕ್ಕಿಳಿಯಲು ಬಿಜೆಪಿಯಲ್ಲಿ ಅಭ್ಯರ್ಥಿಗಳೇ ಇಲ್ಲ ಎಂದು ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಮನೋಜ್‌ ಪಾಂಡೆ ಹೇಳಿದ್ದಾರೆ.

ಸಿಎಂ ಸೊರೇನ್‌ ಅವರ ಕ್ಷೇತ್ರವಾಗಿರುವ ಬರ್ಹೈತ್‌ನಲ್ಲಿ ಅಭ್ಯರ್ಥಿಗಳೇ ಇಲ್ಲದ ಕಾರಣ, ಬಿಜೆಪಿಯು ಜೆಎಂಎಂ ನಾಯಕರಿಗೆ ₹ 5 ಕೋಟಿ ಆಮಿಷ ಒಡ್ಡುತ್ತಿದೆ ಎಂದು ಆರೋಪಿಸಿದ್ದಾರೆ.

ADVERTISEMENT

'ಅವರಿಗೆ (ಬಿಜೆಪಿಯವರಿಗೆ) ಈವರೆಗೆ ಸೂಕ್ತ ಅಭ್ಯರ್ಥಿ ಸಿಕ್ಕಿಲ್ಲ. ಹಾಗಾಗಿ, ಹುಡುಕಾಟ ಮುಂದುವರಿಸಿದ್ದಾರೆ. ₹ 5 ಕೋಟಿ ಪ್ಯಾಕೇಜ್‌ ಘೋಷಿಸಿ ನಮ್ಮ ಪಕ್ಷದ ಯಾರನ್ನಾದರೂ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ' ಎಂದಿದ್ದಾರೆ. ಹಾಗೆಯೇ, 'ರಾಜಕೀಯವಾಗಿ ಬಲಿಯಾಗಲು ಯಾರು ಬಯಸುತ್ತಾರೆ?' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಬಿಜೆಪಿ ಏಕೆ ಇಂತಹ ಪ್ರಯತ್ನ ಮಾಡುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ತಮ್ಮ ಪಕ್ಷಕ್ಕೆ 100–150 ಮತಗಳೂ ಬರುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಹಾಗಾಗಿಯೇ, ಆ ಪಕ್ಷದ ಯಾವ ಅಭ್ಯರ್ಥಿಯೂ ಸಿಎಂ ಸೊರೇನ್‌ ವಿರುದ್ಧ ಕಣಕ್ಕಿಳಿಯಲು ಮುಂದೆ ಬರುತ್ತಿಲ್ಲ' ಎಂದು ಕುಟುಕಿದ್ದಾರೆ.

'ಒಂದು ವೇಳೆ ಬಿಜೆಪಿಯ ಅಭ್ಯರ್ಥಿ ಕೇವಲ 250 ಮತಗಳನ್ನು ಪಡೆದರೆ, ಎಷ್ಟು ಅವಮಾನವಾಗಬಹುದು. ಹಾಗಾಗಿ, ಅವರು ಈ ಕ್ಷೇತ್ರದಿಂದ ಯಾವ ಅಭ್ಯರ್ಥಿಯನ್ನೂ ಕಣಕ್ಕಿಳಿಸದಿರಬಹುದು ಅಥವಾ ಹಣದ ಆಮಿಷಕ್ಕೆ ಯಾರಾದರೂ ನಾಮಪತ್ರ ಸಲ್ಲಿಸಬಹುದು ಎನಿಸುತ್ತಿದೆ' ಎಂದಿದ್ದಾರೆ.

ಸೊರೇನ್‌ ಅವರು ಬರ್ಹೈತ್‌ನಲ್ಲಿ ಮತ್ತು ಅವರ ಪತ್ನಿ, ಶಾಸಕಿ ಕಲ್ಪನಾ ಅವರು ಗಾಂಡೇಯ್‌ನಲ್ಲಿ ಗುರುವಾರ (ಅಕ್ಟೋಬರ್ 24ರಂದು) ನಾಮಪತ್ರ ಸಲ್ಲಿಸಿದ್ದಾರೆ

ಬರ್ಹೈತ್‌ ಕ್ಷೇತ್ರವನ್ನೊಳಗೊಂಡ ಸಂಥಲ್ ಪರಗಣ ಪ್ರದೇಶವು ಜೆಎಂಎಂ ಪಕ್ಷದ ಭದ್ರಕೋಟೆ ಎನಿಸಿದೆ.

2019ರ ಚುನಾವಣೆಯಲ್ಲಿ ಬರ್ಹೈತ್ ಹಾಗೂ ದುಮ್ಕಾ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದ ಸೊರೇನ್‌, ಎರಡೂ ಕಡೆ ಗೆದ್ದಿದ್ದರು. ಬರ್ಹೈತ್‌ನಲ್ಲಿ ಬಿಜೆಪಿಯ ಸಿಮೊನ್‌ ಮಲ್ತೊ ಅವರನ್ನು 25,740 ಮತಗಳಿಂದ ಹಾಗೂ ದುಮ್ಕಾದಲ್ಲಿಯೂ ಅದೇ ಪಕ್ಷದ ಲಾಯಿಸ್‌ ಮರಂಡಿ ಅವರನ್ನು 13,188 ಮತಗಳಿಂದ ಮಣಿಸಿದ್ದರು.

81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಭೆಗೆ ನವೆಂಬರ್‌ 13 ಹಾಗೂ 20ರಂದು ಮತದಾನ ನಡೆಯಲಿದೆ. 20ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.