ನವದೆಹಲಿ/ರಾಂಚಿ: ಜಾರ್ಖಂಡ್ ವಿಧಾನಸಭೆಗೆ 66 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿದೆ.
ಮಾಜಿ ಮುಖ್ಯಮಂತ್ರಿಗಳಾದ ಬಾಬುಲಾಲ್ ಮರಾಂಡಿ, ಚಂಪೈ ಸೊರೇನ್ ಅವರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಜೆಎಂಎಂ ಮುಖಂಡ ಹಾಗೂ ಮುಖ್ಯಮಂತ್ರಿ ಹೇಮಂತ ಸೊರೇನ್ ಅವರ ನಾದಿನಿ ಸೀತಾ ಸೊರೇನ್ ಅವರಿಗೂ ಟಿಕೆಟ್ ನೀಡಲಾಗಿದೆ.
ಬಾಬುಲಾಲ್ ಮರಾಂಡಿ ಅವರಿಗೆ ಗಿರಿಧ್ ಜಿಲ್ಲೆಯ ಧನ್ವಾರ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. 2000ದಲ್ಲಿ ಹೊಸದಾಗಿ ರಚನೆಯಾದ ಜಾರ್ಖಂಡ್ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದ ಮರಾಂಡಿ ಅವರು, ಸದ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದಾರೆ.
ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರಿಗೆ ಸರಾಯ್‌ಕೆಲಾ ಕ್ಷೇತ್ರದಿಂದ ಪಕ್ಷದ ಟಿಕೆಟ್ ನೀಡಲಾಗಿದೆ.
ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಹೇಮಂತ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಆಗ ಕೆಲ ಕಾಲ ಚಂಪೈ ಅವರು ಮುಖ್ಯಮಂತ್ರಿಯಾಗಿದ್ದರು.
ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದ ನಂತರ ಜೈಲಿನಿಂದ ಹೊರ ಬಂದ ಹೇಮಂತ ಸೊರೇನ್ ಪುನಃ ಮುಖ್ಯಮಂತ್ರಿ ಹುದ್ದೆಗೇರಿದಾಗ, ಚಂಪೈ ಸೊರೇನ್ ಅವರು ಜೆಎಂಎಂ ತೊರೆದು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಮುಖ್ಯಮಂತ್ರಿ ಹೇಮಂತ ಸೊರೇನ್ ಅವರ ನಾದಿನಿ, ಸೀತಾ ಸೊರೇನ್ ಅವರನ್ನು ಜಾಮ್‌ತಾಡಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಸೀತಾ ಅವರು ಜೆಎಂಎಂ ಅಧ್ಯಕ್ಷ ಶಿಬು ಸೊರೇನ್ ಅವರ ಹಿರಿಯ ಮಗ ದುರ್ಗ ಅವರ ಪತ್ನಿ. ಜಾರಿ ನಿರ್ದೇಶನಾಲಯವು ಹೇಮಂತ ಸೊರೇನ್ ಅವರನ್ನು ಬಂಧಿಸಿದಾಗ, ಪತ್ನಿ ಕಲ್ಪನಾ ಅವರನ್ನು ಮುಖ್ಯಮಂತ್ರಿ ಮಾಡಲು ಪಕ್ಷವು ಮುಂದಾಗಿತ್ತು. ಈ ತೀರ್ಮಾನವನ್ನು ವಿರೋಧಿಸಿದ್ದ ಸೀತಾ ಅವರು, ಜೆಎಂಎಂ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪತ್ನಿಯರಿಗೂ ಬಿಜೆಪಿ ಟಿಕೆಟ್ ನೀಡಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಅರ್ಜುನ್ ಮುಂಡಾ ಪತ್ನಿ ಮೀರಾ ಅವರಿಗೆ ಪೋಟ್ಕಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದ್ದು, ಇದು ಅವರ ಮೊದಲ ಚುನಾವಣೆ. ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಪತ್ನಿ ಗೀತಾ ಕೋಡಾ ಅವರಿಗೆ ಜಗನ್ನಾಥಪುರ ಕ್ಷೇತ್ರದ ಟಿಕೆಟ್ ನೀಡಲಾಗಿದೆ.
ಜಾರ್ಖಂಡ್ ವಿಧಾನಸಭೆ ಸದಸ್ಯ ಬಲ 81 ಇದ್ದು, ಬಿಜೆಪಿಯು 68 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಮಿತ್ರ ಪಕ್ಷಗಳಾದ ಆಲ್ ಜಾರ್ಖಂಡ್ ಸ್ಟುಡೆಂಟ್ಸ್ ಯೂನಿಯನ್‌ಗೆ (ಎಜೆಎಸ್‌ಯು) 10 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. ಎನ್‌ಡಿಎ ಅಂಗಪಕ್ಷಗಳಾದ ಜೆಡಿಯು ಮತ್ತು ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿಗೆ ಕ್ರಮವಾಗಿ 2 ಮತ್ತು 1 ಸ್ಥಾನ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.