ADVERTISEMENT

ಜಾರ್ಖಂಡ್ ಚುನಾವಣೆ | ರಾಹುಲ್ ಗಾಂಧಿ ತೋರಿಸಿದ ಸಂವಿಧಾನದ ಪ್ರತಿ ನಕಲಿ: ಅಮಿತ್ ಶಾ

ಪಿಟಿಐ
Published 9 ನವೆಂಬರ್ 2024, 10:58 IST
Last Updated 9 ನವೆಂಬರ್ 2024, 10:58 IST
<div class="paragraphs"><p>ರಾಹುಲ್ ಗಾಂಧಿ ಹಾಗೂ ಅಮಿತ್ ಶಾ</p></div>

ರಾಹುಲ್ ಗಾಂಧಿ ಹಾಗೂ ಅಮಿತ್ ಶಾ

   

ಪಿಟಿಐ ಚಿತ್ರಗಳು

ರಾಂಚಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ನಕಲಿ ಪ್ರತಿಯನ್ನು ಪ್ರದರ್ಶಿಸುವ ಮೂಲಕ ಸಂವಿಧಾನಕ್ಕೆ ಅವಮಾನ ಹಾಗೂ ಅಪಹಾಸ್ಯ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ.

ADVERTISEMENT

ಪಲಮು ನಗರದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಶಾ, 'ರಾಹುಲ್‌ ಗಾಂಧಿ ಅವರು ಸಂವಿಧಾನದ ಪ್ರತಿಯನ್ನು ಪ್ರದರ್ಶಿಸಿದ್ದರು. ಎರಡು ದಿನಗಳ ನಂತರ ಅವರ ಗುಟ್ಟು ರಟ್ಟಾಗಿದೆ. ಅವರು ಪ್ರದರ್ಶಿಸಿದ್ದ ಪ್ರತಿ ಕೆಲವರಿಗೆ ಸಿಕ್ಕಿದೆ. ಮುಖಪುಟದಲ್ಲಿ 'ಭಾರತದ ಸಂವಿಧಾನ' ಎಂದು ಬರೆಯಲಾಗಿದ್ದ ಆ ಪುಸ್ತಕದಲ್ಲಿ ಖಾಲಿ ಪುಟಗಳಿವೆ. ಈ ರೀತಿ ಸಂವಿಧಾನವನ್ನು ಅಪಹಾಸ್ಯ ಮಾಡಬೇಡಿ. ಇದು ನಂಬಿಕೆ ಮತ್ತು ವಿಶ್ವಾಸದ ವಿಚಾರವಾಗಿದೆ. ಸಂವಿಧಾನ ಎಂಬ ನಕಲಿ ಪ್ರತಿಯನ್ನು ತೋರಿಸುವ ಮೂಲಕ ನೀವು ಬಿ.ಆರ್‌. ಅಂಬೇಡ್ಕರ್‌ ಮತ್ತು ಸಾಂವಿಧಾನಿಕ ಸಭೆಯನ್ನು ಅವಮಾನಿಸಿದ್ದೀರಿ. ಕಾಂಗ್ರೆಸ್‌ ಪಕ್ಷವು ಸಂವಿಧಾನಕ್ಕೆ ಅಪಮಾನ ಮಾಡಿದೆ' ಎಂದು ದೂರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್‌ 26ರಂದು ಸಂವಿಧಾನ ದಿನ ಆಚರಿಸಲು ನಿರ್ಧರಿಸಿದ್ದಾರೆ ಎಂದೂ ಇದೇ ವೇಳೆ ಹೇಳಿದ್ದಾರೆ.

ಇತರ ಹಿಂದುಳಿದ ವರ್ಗಗಳು (ಒಬಿಸಿ), ಬುಡಕಟ್ಟು ಸಮುದಾಯ ಹಾಗೂ ದಲಿತರಿಗೆ ಕಲ್ಪಿಸಲಾಗಿರುವ ಮೀಸಲಾತಿಯನ್ನು ಕಾಂಗ್ರೆಸ್‌ ಪಕ್ಷವು ಶತಾಯಗತಾಯ ಕಸಿಯಲು ಯತ್ನಿಸುತ್ತಿದೆ ಮತ್ತು ಅದನ್ನು ಅಲ್ಪ ಸಂಖ್ಯಾತರಿಗೆ ನೀಡಲು ಯೋಜಿಸುತ್ತಿದೆ ಎಂದು ಆರೋಪಿಸಿದ್ದಾರೆ.

'ಒಬಿಸಿ ಮೀಸಲಾತಿಯ ವಿರುದ್ಧ ನಿಲುವು ಹೊಂದಿರುವ ಕಾಂಗ್ರೆಸ್‌ ಪಕ್ಷವು, ಮುಸ್ಲಿಂ ಮೌಲ್ವಿಗಳ ನಿಯೋಗವು ಮಹಾರಾಷ್ಟ್ರದಲ್ಲಿ ಆ ಪಕ್ಷದ ನಾಯಕರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ಶೇ 10 ರಷ್ಟು ಮೀಸಲಾತಿ ಕಲ್ಪಿಸುವ ಭರವಸೆ ನೀಡಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಬಿಜೆಪಿಯು ಧರ್ಮಾಧಾರಿತ ಮೀಸಲಾತಿಗೆ ಎಂದಿಗೂ ಅವಕಾಶ ಕಲ್ಪಿಸುವುದಿಲ್ಲ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಸಂವಿಧಾನದ 370ನೇ ವಿಧಿ ಅಡಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪುನಃ ವಿಶೇಷ ಸ್ಥಾನಮಾನ ಕಲ್ಪಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಗುಡುಗಿದ್ದಾರೆ.

'ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. 370ನೇ ವಿಧಿಯನ್ವಯ ವಿಶೇಷ ಸ್ಥಾನಮಾನವನ್ನು ಮರಳಿ ತರಲು ನಿಮ್ಮ ನಾಲ್ಕನೇ ತಲೆಮಾರಿಗೂ ಸಾಧ್ಯವಿಲ್ಲ ಎಂದು ರಾಹುಲ್‌ ಗಾಂಧಿಗೆ ಎಚ್ಚರಿಕೆ ನೀಡುತ್ತೇನೆ' ಎಂದಿದ್ದಾರೆ.

ಜಾರ್ಖಂಡ್‌ನಲ್ಲಿ ಅಧಿಕಾರದಲ್ಲಿರುವ ಜೆಎಂಎಂ ನೇತೃತ್ವದ ಸರ್ಕಾರದ ವಿರುದ್ಧವೂ ಟೀಕಾಪ್ರಹಾರ ನಡೆಸಿರುವ ಶಾ, 'ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ' ಎಂದು ಗುಡುಗಿದ್ದಾರೆ.

'ಅತಿಕ್ರಮ ಪ್ರವೇಶವೇ ಬಿಜೆಪಿಯ ಕಾರ್ಯಸೂಚಿ ಎಂದು ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಹೇಳುತ್ತಾರೆ. ನಾನು ಹೇಳುತ್ತೇನೆ, ಮುಖ್ಯಮಂತ್ರಿಯ ಬ್ಯಾಂಕ್‌ ಆಗಿರುವ ಭ್ರಷ್ಟ ನಾಯಕರನ್ನು ತಲೆಕೆಳಗಾಗಿ ತೂಗುಹಾಕುತ್ತೇವೆ' ಎಂದು ಎಚ್ಚರಿಕೆ ನೀಡಿದ್ದಾರೆ.

81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಬೆಗೆ ನವೆಂಬರ್‌ 13 ಹಾಗೂ 20ರಂದು ಚುನಾವಣೆ ನಡೆಯಲಿದೆ. ಮೂರು ದಿನಗಳ ಬಳಿಕ ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ.

ಪರಿಶಿಷ್ಟರ ಬೆಂಬಲ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌: ಮೋದಿ
‘ಪರಿಶಿಷ್ಟ ಜಾತಿ‌ ಪರಿಶಿಷ್ಟ ಪಂಗಡ ದಲಿತರು ಆದಿವಾಸಿಗಳು ಇತ್ತೀಚಿನ ವರ್ಷಗಳಿಂದ ಒಗ್ಗಟ್ಟಿನಿಂದ ಇದ್ದು ಕಾಂಗ್ರೆಸ್‌ ತನ್ನ ಬೆಂಬಲವನ್ನು ಕಳೆದುಕೊಳ್ಳುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಪಕ್ಷದ ಪರ ರ‍್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘‌ಖಾಲಿ ಹಾಳೆಗಳನ್ನು ಹೊಂದಿದ ಸಂವಿಧಾನ‌ ಪ್ರತಿ ಪ್ರದರ್ಶಿಸಿದ ಕಾಂಗ್ರೆಸ್‌ ರಾಜಕಾರಣದಿಂದ ಇಡೀ ದೇಶ‌ದ ಜನರು ಆಘಾತಕ್ಕೊಳಗಾಗಿದ್ದಾರೆ ಎಂದ ಅವರು ಅಂಬೇಡ್ಕರ್‌ ಅವರಿಗೆ ಅವಮಾನವೆಸಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.