ರಾಂಚಿ (ಪಿಟಿಐ): ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷವು, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಇಬ್ಬರು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಇತ್ತೀಚೆಗೆ ಬಿಜೆಪಿಯಿಂದ ಪಕ್ಷಾಂತರಗೊಂಡು ಜೆಎಂಎಂ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಗಣೇಶ್ ಮಾಹ್ಲಿ ಅವರಿಗೆ ಸೆರೈಕೆಲಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಕುಂತಿ ಕ್ಷೇತ್ರದಿಂದ ರಾಮಸೂರ್ಯ ಮುಂಡಾ ಅವರನ್ನು ಕಣಕ್ಕಿಳಿಸಿದೆ.
ಇದಕ್ಕೂ ಮುನ್ನ ಮೊದಲ ಪಟ್ಟಿಯಲ್ಲಿ 35 ಮಂದಿಗೆ ಮತ್ತು ಎರಡನೇ ಪಟ್ಟಿಯಲ್ಲಿ ಒಬ್ಬರಿಗೆ ಹಾಗೂ ಮೂರನೇ ಪಟ್ಟಿಯಲ್ಲಿ ಐವರು ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಈವರೆಗೆ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದಂತಾಗಿದೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಬರ್ಹೈತ್‌ನಿಂದ ಕಣಕ್ಕಿಳಿದಿದ್ದಾರೆ. ಅವರ ಪತ್ನಿ ಕಲ್ಪನಾ ಸೊರೇನ್ ಅವರು ಗಂಡೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಹೇಮಂತ್ ಅವರ ಸಹೋದರ ಬಸಂತ್ ಸೊರೇನ್ ಅವರು ದುಮ್ಕಾದಿಂದ ಕಣಕ್ಕಿಳಿದಿದ್ದಾರೆ.
ರಾಜ್ಯಸಭಾ ಸದಸ್ಯೆ ಮಹುವಾ ಮಾಜಿ ಅವರನ್ನು ರಾಂಚಿಯಿಂದ ಕಣಕ್ಕಿಳಿಸಲಾಗಿದೆ. ಅವರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿ ಮತ್ತು ಜೆಎಂಎಂ ಮಹಿಳಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2014 ಮತ್ತು 2019ರಲ್ಲಿ ರಾಂಚಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮತದಾನ ಎರಡು ಹಂತಗಳಲ್ಲಿ ನವೆಂಬರ್ 13 ಮತ್ತು 20ರಂದು ನಡೆಯಲಿದೆ. ನವೆಂಬರ್ 23ರಂದು ಮತಎಣಿಕೆ ನಡೆಯಲಿದೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಏಳು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಪಕ್ಷವು ಇದುವರೆಗೆ 28 ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.