ರಾಂಚಿ: ಮತ ಎಣಿಕೆ ಕೇಂದ್ರಗಳ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಬೇಕು ಎಂದು ಕೋರಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಬಿಜೆಪಿಯು ಬೇರೆ ರಾಜ್ಯಗಳ ಎಲೆಕ್ಟ್ರಾನಿಕ್ ತಂತ್ರಜ್ಞರನ್ನು ರಾಜ್ಯದಲ್ಲಿ ನಿಯೋಜಿಸಿದೆ ಎಂದು ಆರೋಪಿಸಿರುವ ಜೆಎಂಎಂ, ಎಣಿಕೆ ಕೇಂದ್ರಗಳ ಬಳಿ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನೂ ನಿರ್ಬಂಧಿಸುವಂತೆ ಮನವಿ ಮಾಡಿದೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ, ರಾಜ್ಯದ 24 ಕೇಂದ್ರಗಳ ಬಳಿ ಇಂದು ನಡೆಯುತ್ತಿದೆ.
ಚುನಾವಣಾ ಆಯೋಗಕ್ಕೆ ಶುಕ್ರವಾರ ಪತ್ರ ಬರೆದಿರುವ ಜೆಎಂಎಂ ವಕ್ತಾರ ಸುಪ್ರಿಯೊ ಭಟ್ಟಾಚಾರ್ಯ, 'ಬಿಜೆಪಿಯು ಬೇರೆಬೇರೆ ರಾಜ್ಯಗಳ ನುರಿತ ಎಲೆಕ್ಟ್ರಾನಿಕ್ ತಂತ್ರಜ್ಞರನ್ನು, ಮತ ಎಣಿಕೆ ಕೇಂದ್ರಗಳ ಬಳಿ ನಿಯೋಜಿಸಿದೆ ಎಂದು ವಿಶ್ವಾಸಾರ್ಹ ಮೂಲಗಳಿಂದ ಗೊತ್ತಾಗಿದೆ. ಇದು ಗಂಭೀರ ವಿಚಾರವಾಗಿದೆ' ಎಂದು ತಿಳಿಸಿದ್ದಾರೆ.
'ನ್ಯಾಯಸಮ್ಮತ ಮತ್ತು ಪಾರದರ್ಶಕ ಎಣಿಕೆ ಪ್ರಕ್ರಿಯೆ ನಡೆಸಬೇಕು. ಮತ ಎಣಿಕೆ ಕೇಂದ್ರಗಳ 2 ಕಿ.ಮೀ ವ್ಯಾಪ್ತಿಯಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಬೇಕು. ಪ್ರತಿಯೊಂದು ಸುತ್ತಿನ ಮತ ಎಣಿಕೆ ಮುಕ್ತಾಯದ ಬಳಿಕ ಧ್ವನಿವರ್ಧಕಗಳ ಮೂಲಕ ಫಲಿತಾಂಶ ಪ್ರಕಟಿಸಬೇಕು' ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.