ADVERTISEMENT

ಜಾರ್ಖಂಡ್‌: ವಂಶವಾದದ 40 ಕುಡಿಗಳು ಅಖಾಡದಲ್ಲಿ

ಜಾರ್ಖಂಡ್‌ ವಿಧಾನಸಭೆ ಚುನಾವಣೆ: ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ ಎಲ್ಲ ಪಕ್ಷಗಳು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 16:15 IST
Last Updated 5 ನವೆಂಬರ್ 2024, 16:15 IST
ಹೇಮಂತ್ ಸೊರೇನ್
ಹೇಮಂತ್ ಸೊರೇನ್   

ನವದೆಹಲಿ: ಜಾರ್ಖಂಡ್‌ ವಿಧಾನಸಭೆ ಚುನಾವಣೆಯ ಟಿಕೆಟ್‌ ಹಂಚಿಕೆಯಲ್ಲಿ ಎಲ್ಲ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿವೆ. ಪಕ್ಷಗಳು ಮಾಜಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಮಾಜಿ ಜನಪ್ರತಿನಿಧಿಗಳ ಕುಟುಂಬದ 40 ಸದಸ್ಯರಿಗೇ ಟಿಕೆಟ್‌ ಹಂಚಿವೆ. ಇದರಲ್ಲಿ 17 ಮಂದಿ ಮಾಜಿ ಶಾಸಕರ ಮಕ್ಕಳು. 

ಕಾಂಗ್ರೆಸ್‌ ಪಕ್ಷದ ವಿರುದ್ಧ ಕುಟುಂಬ ರಾಜಕಾರಣದ ಅಸ್ತ್ರವನ್ನು ಬಿಜೆಪಿ ನಿರಂತರ ಬಳಸುತ್ತಾ ಬಂದಿದೆ. ವಂಶಪಾರಂಪರ್ಯ ರಾಜಕಾರಣದ ಕಡು ವಿರೋಧಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ್ದಾರೆ. ಜಾರ್ಖಂಡ್‌ ಚುನಾವಣಾ ಪ್ರಚಾರದ ವೇಳೆಯೂ ಪರಿವಾರ ವಾದದ ವಿರುದ್ಧ ಕಿಡಿಕಾರಿದ್ದಾರೆ. ತಮಾಷೆಯೆಂದರೆ, ಅವರ ಪಕ್ಷವೇ ವಂಶವಾದಕ್ಕೆ ಹೆಚ್ಚಿನ ಮನ್ನಣೆ ನೀಡಿದೆ. ಕಮಲ ಪಾಳಯದಿಂದ ವಿವಿಧ ಕುಟುಂಬಗಳ 17 ಕುಡಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿ 68 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಬಿಜೆಪಿ ಮಿತ್ರ ಪಕ್ಷ ಆಲ್‌ ಜಾರ್ಖಂಡ್‌ ಸ್ಟೂಡೆಂಟ್ಸ್‌ ಯೂನಿಯನ್‌ (ಎಜೆಎಸ್‌ಯು) 10 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಇವರಲ್ಲಿ ಇಬ್ಬರು ಅಭ್ಯರ್ಥಿಗಳು ವಂಶವಾದದ ಹಿನ್ನೆಲೆಯವರು. 

ಆಡಳಿತರೂಢ ಜೆಎಂಎಂ– ಕಾಂಗ್ರೆಸ್ ಮೈತ್ರಿಕೂಟ ಈ ವಿಷಯದಲ್ಲಿ ಹಿಂದುಳಿದಿಲ್ಲ. ಜೆಎಂಎಂ ಪಕ್ಷದ 10, ಕಾಂಗ್ರೆಸ್‌ನ ಎಂಟು, ಆರ್‌ಜೆಡಿ ಹಾಗೂ ಎಡಪಕ್ಷಗಳ ತಲಾ ಒಬ್ಬರು ಅಭ್ಯರ್ಥಿಗಳು ಸಚಿವರು, ಮಾಜಿ ಶಾಸಕರ ಹತ್ತಿರದ ಸಂಬಂಧಿಗಳು. 

ADVERTISEMENT

ಜೆಎಂಎಂ ಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್‌ ಕುಟುಂಬದ ನಾಲ್ವರು ಚುನಾವಣಾ ಅಖಾಡದಲ್ಲಿದ್ದಾರೆ. ಜೆಎಂಎಂನಿಂದ ಮುಖ್ಯಮಂತ್ರಿ ಹೇಮಂತ್ ಸೊರೇನ್, ಅವರ ಪತ್ನಿ ಕಲ್ಪನಾ ಮತ್ತು ಶಿಬು ಸೊರೇನ್ ಅವರ ಕಿರಿಯ ಪುತ್ರ ಬಸನ್ ಸೊರೇನ್ ಅವರಿಗೆ ಟಿಕೆಟ್‌ ನೀಡಲಾಗಿದೆ. ಜೆಎಂಎಂ ತೊರೆದುಬಂದ ಮತ್ತೊಬ್ಬ ನಾಯಕಿ ಸೀತಾ ಸೊರೇನ್‌ ಅವರನ್ನು ಬಿಜೆಪಿ ಜಮ್ತಾರ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಸೀತಾ ಅವರು ಶಿಬು ಸೊರೇನ್‌ ಅವರ ಸೊಸೆ. ಹೇಮಂತ್‌ ಸೊರೇನ್‌ ಅವರ ಕುಟುಂಬ ರಾಜಕಾರಣ ವಿರೋಧಿಸಿ ಸೀತಾ ಅವರು ಕಮಲ ಪಾಳಯಕ್ಕೆ ಜಿಗಿದಿದ್ದರು. 

ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪತ್ನಿಯರನ್ನು ಬಿಜೆಪಿ ಹುರಿಯಾಳುಗಳನ್ನಾಗಿ ಮಾಡಿದೆ.  ಜಗನ್ನಾಥಪುರದಿಂದ ಮಧು ಕೋಡಾ ಪತ್ನಿ ಗೀತಾ ಕೋಡಾ ಮತ್ತು ಪೊಟ್ಕಾದಿಂದ ಅರ್ಜುನ್ ಮುಂಡಾ ಪತ್ನಿ ಮೀರಾ ಕಣಕ್ಕಿಳಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಒಡಿಶಾ ರಾಜ್ಯಪಾಲರಾಗಿರುವ ರಘುವರ್ ದಾಸ್ ಅವರ ಸೊಸೆ ಪೂರ್ಣಿಮಾ ದಾಸ್ ಸಾಹು ಜೆಮ್‌ಶೆಡ್‌ಪುರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಸರೈಕೆಲಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.