ನವದೆಹಲಿ: ಉಪಚುನಾವಣೆ ಗಳ ಜೊತೆಯಲ್ಲಿಯೇ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನವೂ ಬುಧವಾರ ನಡೆಯಲಿದೆ. ಒಟ್ಟು 81 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಹಾರಾಷ್ಟ್ರದ ಎಲ್ಲ 288 ಕ್ಷೇತ್ರಗಳೊಂದಿಗೆ ಜಾರ್ಖಂಡ್‌ನ ಉಳಿದ 38 ಕ್ಷೇತ್ರಗಳಿಗೂ ನ.20ರಂದು ಮತದಾನ ನಡೆಯಲಿದೆ.
ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟವು ಮರಳಿ ಅಧಿಕಾರಕ್ಕೆ ಬರುವ ಯತ್ನದಲ್ಲಿದೆ. ಆದರೆ, ಬಿಜೆಪಿಯು ‘ಇಂಡಿಯಾ’ಕ್ಕೆ ತೀವ್ರ ಸ್ಪರ್ಧೆ ಒಡ್ಡುತ್ತಿದೆ. ತನ್ನ ‘ಉಗ್ರ ಹಿಂದುತ್ವ’ ಕಾರ್ಯಸೂಚಿಯನ್ನು ಬಿಜೆಪಿ ಜನರ ಮುಂದಿರಿಸಿದೆ. ಜೊತೆಗೆ, ‘ಬಾಂಗ್ಲಾದೇಶದ ನುಸುಳುಕೋರರನ್ನು ಇಲ್ಲಿನ ಸರ್ಕಾರವು ಜಾರ್ಖಂಡ್ ಒಳಗೆ ಬಿಟ್ಟುಕೊಳ್ಳುತ್ತಿದೆ’ ಎಂಬ ಆರೋಪವನ್ನು ಬಿಜೆಪಿ ಮಾಡಿದೆ.
ಇದಕ್ಕೆ ಪ್ರತಿಯಾಗಿ ‘ಇಂಡಿಯಾ’ವು ಉದ್ಯೋಗ, ಜಾತಿ ಜನಗಣತಿ, ಸಂವಿಧಾನ ರಕ್ಷಣೆ, ಮಹಿಳೆಯರಿಗೆ ಧನಸಹಾಯ ಮುಂತಾದ ಅಭಿವೃದ್ಧಿ ಕೇಂದ್ರಿತ ವಿಚಾರಗಳನ್ನು ಜನರ ಮುಂದಿರಿಸಿದೆ.
31 ಕ್ಷೇತ್ರಗಳಲ್ಲಿ ಇಂದು ಮತದಾನ
ಜೈಪುರ/ಕೋಲ್ಕತ್ತ: 10 ರಾಜ್ಯಗಳ 31 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಬುಧವಾರ ಮತದಾನ ನಡೆಯಲಿದೆ.
ಈ ಉಪಚುನಾವಣೆಗಳ ಫಲಿತಾಂಶವು ಯಾವ ರಾಜ್ಯ ಸರ್ಕಾರವನ್ನೂ ಅಸ್ಥಿರಗೊಳಿಸುವುದಿಲ್ಲ. ಆದರೆ, ‘ಇಂಡಿಯಾ’ ಮೈತ್ರಿಕೂಟಕ್ಕೆ ಈ ಉಪಚುನಾವಣೆಗಳ ಫಲಿತಾಂಶವು ಬಹಳ ಮುಖ್ಯವೆನಿಸಿದೆ. ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟವು ಒಗ್ಗಟ್ಟು ಪ್ರದರ್ಶಿಸಲು ಸೋತಿತು. ಆದ್ದರಿಂದ, ಈ ಮೈತ್ರಿಕೂಟಕ್ಕೆ ಫಲಿತಾಂಶವು ‘ಅಗ್ನಿಪರೀಕ್ಷೆ’ ಎಂದೇ ವಿಶ್ಲೇಷಿಸಲಾಗುತ್ತಿದೆ.
ಶಾಸಕರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದಲೇ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿವೆ. ಕೆಲವೆಡೆ ಶಾಸಕರು ಮೃತಪಟ್ಟಿದ್ದರಿಂದ ಉಪಚುನಾವಣೆ ನಡೆಯುತ್ತಿವೆ. ಸಿಕ್ಕಿಂನ ಎರಡು ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆಯಬೇಕಿತ್ತು. ಆದರೆ, ಈ ಕ್ಷೇತ್ರಗಳಲ್ಲಿ ಹಲವು ಅಭ್ಯರ್ಥಿಗಳು ನಾಮಪತ್ರ ವಾಪಸು ಪಡೆದ ಕಾರಣ ಸಿಕ್ಕಿಂ ಕ್ರಾಂತಿ ಮೋರ್ಚಾ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.
ಉತ್ತರ ಪ್ರದೇಶದ 9, ಪಂಜಾಬ್‌ನ 4, ಕೇರಳದ 1 ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆಯಬೇಕಿತ್ತು. ಆದರೆ, ಹಬ್ಬಗಳ ಕಾರಣದಿಂದ ಚುನಾವಣಾ ಆಯೋಗವು ಈ ಕ್ಷೇತ್ರಗಳ ಮತದಾನವನ್ನು ನವೆಂಬರ್ 20ಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.