ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್ ಬಣ) ಸ್ಪರ್ಧಿಸಲಿದ್ದು, ಮೈತ್ರಿ ಅಥವಾ ಏಕಾಂಗಿಯಾಗಿ ಚುನಾವಣೆ ಎದುರಿಸುವುದು ಸೇರಿದಂತೆ ಎಲ್ಲ ಆಯ್ಕೆಗಳ ಕುರಿತು ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಚಿಕ್ಕವನಿದ್ದಾಗ ಜಾರ್ಖಂಡ್ ಏಕೀಕೃತ ಬಿಹಾರಕ್ಕೆ ಸೇರಿದ್ದಾಗಿತ್ತು. ನಮ್ಮ ತಂದೆ ಜಾರ್ಖಂಡ್‌ನಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ನಮ್ಮ ಪಕ್ಷವು ದೊಡ್ಡ ವೋಟ್‌ಬ್ಯಾಂಕ್ ಹೊಂದಿದೆ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸಲು ನಿರ್ಧರಿಸಿದೆ’ ಎಂದು ಹೇಳಿದ್ದಾರೆ.
ಎನ್‌ಡಿಎ ಮಿತ್ರಪಕ್ಷಗಳಾದ ಎಜೆಎಸ್‌ಯು ಪಕ್ಷ ಮತ್ತು ಜನತಾ ದಳದೊಂದಿಗೆ (ಸಂಯುಕ್ತ) ಬಿಜೆಪಿ ಮೈತ್ರಿ ಮಾಡಿಕೊಂಡು ಜಾರ್ಖಂಡ್ ವಿಧಾನಸಭಾ ಚುನಾವಣೆ ಎದುರಿಸಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ ಒಂದು ದಿನದ ಬಳಿಕ ಚಿರಾಗ್ ಪಾಸ್ವಾನ್ ತಮ್ಮ ನಿಲುವು ಪ್ರಕಟಿಸಿದ್ದಾರೆ.
ಮೈತ್ರಿಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದವು ಶೇ 99ರಷ್ಟು ಪೂರ್ಣಗೊಂಡಿದೆ. ಉಳಿದ ಒಂದು ಅಥವಾ ಎರಡು ಸೀಟುಗಳ ಸಂಬಂಧದ ಮಾತುಕತೆ ಮುಂದುವರಿದಿದ್ದು, ಶೀಘ್ರವೇ ಅಂತಿಮಗೊಳ್ಳಲಿದೆ. ‘ಪಿತೃಪಕ್ಷ’ ಅ.2ರಂದು ಮುಕ್ತಾಯಗೊಂಡ ಬಳಿಕ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಜಾರ್ಖಂಡ್‌ನ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿರುವ ಶರ್ಮಾ ಅವರು ತಿಳಿಸಿದ್ದರು.
ಜಾರ್ಖಂಡ್‌ನಲ್ಲಿ 81 ಸದಸ್ಯ ಬಲದ ವಿಧಾನಸಭೆಗೆ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.