ADVERTISEMENT

ಶಾಸಕರನ್ನು ಅಪಹರಿಸಿ ಸಮಾಜ ಒಡೆಯುತ್ತಿರುವ ಬಿಜೆಪಿ: ಜಾರ್ಖಂಡ್ ಸಿಎಂ ಸೊರೇನ್ ಕಿಡಿ

ಪಿಟಿಐ
Published 18 ಆಗಸ್ಟ್ 2024, 14:04 IST
Last Updated 18 ಆಗಸ್ಟ್ 2024, 14:04 IST
<div class="paragraphs"><p>ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್</p></div>

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್

   

ಗೊಡ್ಡಾ: ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ನಾಯಕ ಚಂಪೈ ಸೊರೇನ್‌ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಯ ನಡುವೆ, ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಕೇಸರಿ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

ಚಂಪೈ ಅವರು ದೆಹಲಿ ತಲುಪಿದ ಕೆಲವೇ ಹೊತ್ತಿನ ಬಳಿಕ ಹೇಳಿಕೆ ನೀಡಿರುವ ಹೇಮಂತ್‌, ಶಾಸಕರನ್ನು ಅಪಹರಿಸುತ್ತಿರುವ ಬಿಜೆಪಿಯು, 'ಸಮಾಜವನ್ನು ವಿಭಜಿಸುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಮುಖ್ಯಮಂತ್ರಿ, 'ಬುಡಕಟ್ಟು ಸಮುದಾಯದವರು, ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರ ನಡುವೆ ವಿಷ ಹರಡುವ ಸಲುವಾಗಿ ಹಾಗೂ ಪರಸ್ಪರ ಕಚ್ಚಾಡುವಂತೆ ಮಾಡುವುದಕ್ಕಾಗಿ ಬಿಜೆಪಿಯು ಗುಜರಾತ್‌, ಅಸ್ಸಾಂ ಮತ್ತು ಮಹಾರಾಷ್ಟ್ರದಿಂದ ಜನರನ್ನು ಕರೆತಂದಿದೆ' ಎಂದು ಆರೋಪಿಸಿದ್ದಾರೆ.

ಜೆಎಂಎಂ ಪಕ್ಷದ ಮುಖ್ಯಸ್ಥರೂ ಆಗಿರುವ ಹೇಮಂತ್‌, 'ಸಮಾಜದ ವಿಚಾರ ಹಾಗಿರಲಿ, ಈ ಜನರು (ಬಿಜೆಪಿಯವರು) ಕುಟುಂಬಗಳನ್ನೇ ಒಡೆಯುತ್ತಿದ್ದಾರೆ. ಪಕ್ಷಗಳನ್ನು ವಿಭಜಿಸಲು ಕೆಲಸ ಮಾಡುತ್ತಿದ್ದಾರೆ. ಶಾಸಕರನ್ನು ಅಪಹರಿಸಲಿದ್ದಾರೆ. ಹಣವಿದ್ದರೆ ಅತ್ತಿಂದಿತ್ತ ಮತ್ತು ಇತ್ತಿಂದತ್ತ ಹೋಗಲು ರಾಜಕಾರಣಿಗಳಿಗೆ ಹೆಚ್ಚು ಸಮಯ ಬೇಕಾಗದು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಭೆಗೆ ಈ ವರ್ಷಾಂತ್ಯ ಅಥವಾ 2025ರ ಆರಂಭದಲ್ಲಿ ಚುನಾವಣೆ ನಡೆಯಲಿದೆ. ಈ ಬಗ್ಗೆಯೂ ಮಾತನಾಡಿರುವ ಸಿಎಂ ಸೊರೇನ್‌, ರಾಜ್ಯದಲ್ಲಿ ನಡೆಯಬೇಕಿರುವ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗವಲ್ಲ, ವಿರೋಧ ಪಕ್ಷ ನಿರ್ಧರಿಸುತ್ತದೆ ಎಂದಿದ್ದಾರೆ. ಆ ಮೂಲಕ ವಿರೋಧ ಪಕ್ಷ ಬಿಜೆಪಿಯತ್ತ ಚಾಟಿ ಬೀಸಿದ್ದಾರೆ.

'ಚುನಾವಣಾ ಆಯೋಗವು ಹೆಚ್ಚು ಕಾಲ ಸಾಂವಿಧಾನಿಕ ಸಂಸ್ಥೆಯಾಗಿ ಉಳಿಯುವುದಿಲ್ಲ ಎನಿಸುತ್ತದೆ. ಅದನ್ನು ಬಿಜೆಪಿಯವರು ಅತಿಕ್ರಮಿಸಿದ್ದಾರೆ' ಎಂದು ಗುಡುಗಿದ್ದಾರೆ.

ಚಂಪೈ ಬಿಜೆಪಿಗೆ!
ಜೆಎಂಎಂ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರು ಇಂದು ಮಧ್ಯಾಹ್ನ ದೆಹಲಿ ತಲುಪಿದ್ದು, ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಚಂಪೈ ಅವರು ಕೋಲ್ಕತ್ತದಿಂದ ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ.

ದೆಹಲಿ ತಲುಪಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಚಂಪೈ, ಬಿಜೆಪಿಯ ಯಾವ ನಾಯಕರನ್ನೂ ಭೇಟಿಯಾಗಿಲ್ಲ. ವೈಯಕ್ತಿಕ ಕೆಲಸದ ಸಲುವಾಗಿ ಬಂದಿದ್ದೇನೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.