ADVERTISEMENT

ಜಾರ್ಖಂಡ್‌ನಲ್ಲಿ ಹೇಮಂತ್‌ ಸದಸ್ಯತ್ವದ ಬಗ್ಗೆ ಕುತೂಹಲ, ಕುದುರೆ ವ್ಯಾಪಾರದ ಆತಂಕ

ಪಿಟಿಐ
Published 29 ಆಗಸ್ಟ್ 2022, 3:17 IST
Last Updated 29 ಆಗಸ್ಟ್ 2022, 3:17 IST
ಮುಖ್ಯಮಂತ್ರಿ ಹೇಮಂತ್‌ ಸೊರೇನ್‌
ಮುಖ್ಯಮಂತ್ರಿ ಹೇಮಂತ್‌ ಸೊರೇನ್‌    

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಅನರ್ಹತೆಗೆ ಸಂಬಂಧಿಸಿದ ಕುತೂಹಲ ಮುಂದುವರಿದಿರುವಾಗಲೇ, ಅಲ್ಲಿ ಕುದುರೆ ವ್ಯಾಪಾರದ ಆತಂಕವೂ ಮನೆ ಮಾಡಿದೆ.

ಸಿಎಂ ಸದಸ್ಯತ್ವಕ್ಕೆ ಸಂಬಂಧಿಸಿದ ನಿರ್ಧಾರವನ್ನು ಘೋಷಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯಪಾಲರು ಕುದುರೆ ವ್ಯಾಪಾರವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಯುಪಿಎ ಆರೋಪಿಸಿದೆ.

ಜಾರ್ಖಂಡ್‌ನಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿರುವ ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಭಾನುವಾರ ಸರಣಿ ಸಭೆಗಳಲ್ಲಿ ತೊಡಗಿದವು. ನಂತರ ಜಂಟಿ ಪತ್ರಿಕಾಗೋಷ್ಠಿ ನಡೆಸಿದವು. ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ ಮನೆ ಮಾಡಿರುವ ಗೊಂದಲವನ್ನು ನಿವಾರಿಸಬೇಕು ಎಂದು ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್ ಅವರನ್ನು ಪಕ್ಷಗಳು ಒತ್ತಾಯಿಸಿದವು.

ADVERTISEMENT

ಹೇಮಂತ್‌ ಸೊರೇನ್‌ ಅವರು ಕಳೆದ ಬಾರಿ ಸಿಎಂ ಆಗಿದ್ದಾಗ ಗಣಿಗಾರಿಕೆ ಗುತ್ತಿಗೆ ನವೀಕರಣದಲ್ಲಿ ಮಾಡಿದ ಅಕ್ರಮದ ಕಾರಣಕ್ಕೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಭಾರತೀಯ ಚುನಾವಣಾ ಆಯೋಗವು ಜಾರ್ಖಂಡರ್ ರಾಜ್ಯಪಾಲರಿಗೆ ಪತ್ರ ಬರೆದಿದೆ ಎಂದು ಹೇಳಲಾಗುತ್ತಿದ್ದು, ಈ ಬೆಳವಣಿಗೆ ಅಲ್ಲಿನ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿ ಮಾಡಿದೆ.

‘ಚುನಾವಣಾ ಆಯೋಗದಿಂದ ಯಾವುದೇ ವರದಿ ಬಂದಿದ್ದರೆ ರಾಜ್ಯಪಾಲರು ಅದನ್ನು ಬಹಿರಂಗಗೊಳಿಸಬೇಕು. ಈ ಬಗ್ಗೆ ರಾಜ್ಯಪಾಲರು ತಮ್ಮ ನಿರ್ಧಾರವನ್ನು ಪ್ರಕಟಿಸಬೇಕು. ಈ ಗೊಂದಲದಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳುತ್ತಿವೆ’ ಎಂದು ಜೆಎಂಎಂನ ಹಿರಿಯ ಶಾಸಕ ಹಾಗೂ ಸಚಿವ ಚಂಪೈ ಸೊರೇನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಮ್ಮಿಶ್ರ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಬನ್ನಾ ಗುಪ್ತಾ, ಗೊಂದಲ ನಿವಾರಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದರು.

‘ರಾಜ್ಯಪಾಲರು ಕಾಲಹರಣ ಮಾಡುವ ಮೂಲಕ ಕುದುರೆ ವ್ಯಾಪಾರವನ್ನು ಉತ್ತೇಜಿಸಲು ಬಯಸುತ್ತಿದ್ದಾರೆಯೇ? ರಾಜ್ಯಪಾಲರಿಗೆ ಕಾನೂನು ಸಲಹೆ ಸಿಗುತ್ತಿಲ್ಲವೇ? ಇದು ಪ್ರಜಾಪ್ರಭುತ್ವಕ್ಕೆ ಮತ್ತು ಜನತೆಗೆ ಮಾಡಿದ ಅವಮಾನ' ಎಂದು ನಂತರ ಬಿಡುಗಡೆ ಮಾಡಿದ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಮೂರೂ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ರಾಜ್ಯಪಾಲ ಬೈಸ್ ಅವರು ಸೋಮವಾರ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ರಾಜಭವನದ ಮೂಲಗಳು ಹೇಳಿವೆ.

‘ಮಹಾರಾಷ್ಟ್ರದಂತೆಯೇ ಜಾರ್ಖಂಡ್‌ ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿರುವ ಬಿಜೆಪಿಯು ತನ್ನ ಮತ್ತು ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಗಂಭೀರ ಪ್ರಯತ್ನ ನಡೆಸುತ್ತಿದೆ’ ಎಂದು ಜೆಎಂಎಂ ಶಂಕೆ ವ್ಯಕ್ತಪಡಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ದೀಪಕ್ ಪ್ರಕಾಶ್, ‘ಕಾನೂನು ಪ್ರಕ್ರಿಯೆಯು ತನ್ನದೇ ಆದ ಸಮಯ ತೆಗೆದುಕೊಳ್ಳಲಿದೆ’ ಎಂದು ಹೇಳಿದ್ದಾರೆ.

81 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಯುಪಿಎ ಮೈತ್ರಿಕೂಟವು 49 ಶಾಸಕರನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.