ADVERTISEMENT

ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ ಫಲಿತಾಂಶ: ಯಾವ ಸಮೀಕ್ಷೆಗಳು ಏನು ಹೇಳಿದ್ದವು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ನವೆಂಬರ್ 2024, 7:09 IST
Last Updated 23 ನವೆಂಬರ್ 2024, 7:09 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಅದರಂತೆ ‘ಮಹಾಯುತಿ’ ಕೂಟ ಬಹುಮತದತ್ತ ದಾಪುಗಾಲಿಟ್ಟಿದೆ.

ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದ್ದ ಮಹಾವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟ ತೀವ್ರ ಮುಖಭಂಗಕ್ಕೊಳಗಾಗಿದೆ. ಎಂವಿಎ ಕೂಟ ಅಧಿಕಾರಕ್ಕೆ ಬರಲಿದೆ ಎಂದು ಕೇವಲ ಎರಡು ಸಮೀಕ್ಷೆಗಳು ಅಂದಾಜಿಸಿದ್ದವು.

ADVERTISEMENT

ಮಹಾರಾಷ್ಟ್ರದಲ್ಲಿ ಸದ್ಯದ ಟ್ರೆಂಡ್‌ ಪ್ರಕಾರ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ 221 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಮಹಾವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟವು 54 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಇತ್ತ ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿದ್ದವು. ಆದರೆ, ಸದ್ಯದ ಟ್ರೆಂಡ್‌ ಸಮೀಕ್ಷೆಗಳನ್ನು ತಲೆಕೆಳಗಾಗುವಂತೆ ಮಾಡಿದೆ.

ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ 50 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ನೇತೃತ್ವದ ‘ಎನ್‌ಡಿಎ’ ಮೈತ್ರಿಕೂಟ 30 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಬುಧವಾರದಂದು (ನ.20) ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಜಾರ್ಖಂಡ್‌ನ 81 ಸ್ಥಾನಗಳಿಗೆ ನ. 13ರಂದು ಮತ್ತು ನ.20ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು.

ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 5-7 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕೆಲವು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.

ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆಗಳ ಚುನಾವಣೆಯಲ್ಲಿ ಬಹುತೇಕ ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ಸುಳ್ಳಾಗಿತ್ತು. ಈ ಸಮೀಕ್ಷೆಗಳನ್ನು ಭಾರತೀಯ ಚುನಾವಣಾ ಆಯೋಗ ಕಟುವಾಗಿ ಟೀಕಿಸಿತ್ತು.

‘81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಭೆಯಲ್ಲಿ ಕಾಂಗ್ರೆಸ್‌–ಜೆಎಂಎಂ ಮೈತ್ರಿಕೂಟಕ್ಕೆ ಅಂದಾಜು 53 ಸ್ಥಾನಗಳು ಸಿಗಲಿವೆ. ಎನ್‌ಡಿಎ ಮೈತ್ರಿಕೂಟ ಕೇವಲ 25 ಸ್ಥಾನಗಳನ್ನು ಗಳಿಸಲಿದೆ. ಉಳಿದ ಪಕ್ಷಗಳು 3 ಕ್ಷೇತ್ರಗಳಲ್ಲಿ ಜಯ ಗಳಿಸಲಿವೆ’ ಎಂದು ‘ಆ್ಯಕ್ಸಿಸ್‌ ಮೈ ಇಂಡಿಯಾ’ ಭವಿಷ್ಯ ನುಡಿದಿದೆ. ಆದರೆ, ಎನ್‌ಡಿಎ ಜಯ ಗಳಿಸಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿದ್ದವು.

ಹಲವಾರು ಸುದ್ದಿ ಸಂಸ್ಥೆಗಳೊಂದಿಗೆ ನಡೆಸಲಾದ ಮ್ಯಾಟ್ರಿಜ್ ಸಮೀಕ್ಷೆಯು ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಶೇ 48 ಮತಗಳೊಂದಿಗೆ 150–170 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿವೆ ಎಂದು ಅಂದಾಜಿಸಿತ್ತು.

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ (ಶಿಂದೆ ಬಣ)-ಎನ್‌ಸಿಪಿ (ಅಜಿತ್‌ ಪವಾರ್‌ ಬಣ) ಮೈತ್ರಿಕೂಟ (ಮಹಾಯುತಿ) ಅಧಿಕಾರದಲ್ಲಿದ್ದರೆ, ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟ ಆಡಳಿತ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.