ADVERTISEMENT

ಜಾರ್ಖಂಡ್ | BJP ಅಧಿಕಾರಕ್ಕೆ ಬಂದರೆ ಹುಸೈನಾಬಾದ್‌ಗೆ ರಾಮ, ಕೃಷ್ಣನ ಹೆಸರು: ಹಿಮಂತ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 10:33 IST
Last Updated 23 ಅಕ್ಟೋಬರ್ 2024, 10:33 IST
<div class="paragraphs"><p>ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ</p></div>

ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ

   

– ಪಿಟಿಐ ಚಿತ್ರ

ಮೇದಿನಿನಗರ (ಜಾರ್ಖಂಡ್): ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹುಸೈನಾಬಾದ್‌ ಉಪ–ವಿಭಾಗವನ್ನು ಜಿಲ್ಲೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಅಲ್ಲದೆ, ಹೊಸ ಜಿಲ್ಲೆಗೆ ರಾಮ ಅಥವಾ ಕೃಷ್ಣನ ಹೆಸರಿಡಲಾಗುವುದು ಎಂದು ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಸಹ ಉಸ್ತುವಾರಿಯೂ ಆಗಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

ADVERTISEMENT

ಅಲ್ಲದೆ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಿಂದ ಅಕ್ರಮ ವಲಸಿಗರನ್ನು ಹೊರದಬ್ಬಲಾಗುವುದು ಎಂದಿದ್ದಾರೆ.

ಪಲಾಮು ಜಿಲ್ಲೆಯ ಜಾಪ್ಲಾ ಮೈದಾನದಲ್ಲಿ ನಡೆದ ಚುನಾವಣಾ ಸಮಾವೇಶದದಲ್ಲಿ ಅವರು ಹುಸೈನಾಬಾದ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಮಲೇಶ್ ಸಿಂಗ್‌ ಪರ ಮತಯಾಚನೆ ನಡೆಸಿದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಹುಸೈನಾಬಾದ್‌ ಅನ್ನು ಜಿಲ್ಲೆಯನ್ನಾಗಿ ಮಾಡಲಾಗುವುದು. ಅದಕ್ಕೆ ಭಗವಾನ್ ರಾಮ ಅಥವಾ ಕೃಷ್ಣನ ಹೆಸರು ಇಡಲಾಗುವುದು’ ಎಂದು ಹೇಳಿದ್ದಾರೆ.

ಬಾಂಗ್ಲಾದೇಶಿ ನುಸುಳುಕೋರರಿಂದಾಗಿ ಜಾರ್ಖಂಡ್‌ನ ಜನಸಂಖ್ಯಾ ಸ್ವರೂಪ ಬದಲಾಗುತ್ತಿದೆ. ಆದರೆ ತನ್ನ ಮತಬ್ಯಾಂಕ್ ಆಗಿರುವುದರಿಂದ ಆಡಳಿತಾರೂಢ ಜೆಎಂಎಂ ಈ ವಿಷಯದ ಬಗ್ಗೆ ಮೌನವಾಗಿದೆ ಎಂದು ಅವರು ಆರೋಪಿಸಿದ್ದಾರೆ.

‘ಒಳನುಸುಳುಕೋರರನ್ನು ಹೊರದಬ್ಬುವುದು ನಮ್ಮ ಮೊದಲ ಆದ್ಯತೆ. ಜಾರ್ಖಂಡ್‌ನಲ್ಲಿರುವ ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಹಾಕಲು ನಾವು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೊಳಿಸುತ್ತೇವೆ’ ಎಂದು ಹೇಳಿದ್ದಾರೆ.

ಜಾರ್ಖಂಡ್‌ನಲ್ಲಿ ನವೆಂಬರ್‌ 13 ಹಾಗೂ 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಮತಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.