ಜಮ್ತಾರಾ: ಜಾರ್ಖಂಡ್‌ನ ಜೆಎಂಎಂ ನೇತೃತ್ವದ ಮೈತ್ರಿಕೂಟದ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ನೈಸರ್ಗಿಕ ಸಂಪನ್ಮೂಲಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿದ ಕೇಂದ್ರದ ಹಣವನ್ನು ಲೂಟಿ ಮಾಡುವ ಮೂಲಕ ಜೆಎಂಎಂ ಮೈತ್ರಿಕೂಟವು ಡಕಾಯಿತಿಯಲ್ಲಿ ತೊಡಗಿದೆ ಎಂದು ಟೀಕಿಸಿದ್ದಾರೆ.
ಜಮ್ತಾರಾದ ನಾಲಾದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಜೆಎಂಎಂ ಲೂಟಿಯಿಂದಾಗಿ ಬಾಂಗ್ಲಾದೇಶಿ ವಲಸಿಗರು ಮತ್ತು ರೋಹಿಂಗ್ಯಾಗಳ ಒಳನುಸುಳುವಿಕೆ ಹೆಚ್ಚಳವಾಗಿದೆ. ಮಕ್ಕಳು, ಮಣ್ಣು ಹಾಗೂ ಆಹಾರಕ್ಕೆ ಸಮಸ್ಯೆ ಎದುರಾಗಿದೆ. ಈಗ, ಲೂಟಿ ಮಾಡಿದ ಹಣವನ್ನು ಮರಳಿ ಪಡೆಯಲು ಬುಲ್ಡೋಜರ್ ಸಿದ್ಧವಾಗಿದೆ’ ಎಂದು ಹೇಳಿದ್ದಾರೆ.
ಸುರಕ್ಷಿತವಾಗಿರಲು ಹಿಂದೂಗಳೆಲ್ಲಾ ಒಂದಾಗಬೇಕು ಎಂದು ಕರೆ ನೀಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಈಗ ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಾಣವಾಗುವ ಸಮಯ ಬಂದಿದೆ ಎಂದು ಪ್ರತಿಪಾದಿಸಿದ್ದಾರೆ.
ಮರಳು, ಕಲ್ಲಿದ್ದಲು ಮತ್ತು ಅರಣ್ಯ ಸಂಪನ್ಮೂಲಗಳ ಅವ್ಯಾಹತ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆಯು ಈ ಸರ್ಕಾರದಲ್ಲಿ ಹೆಚ್ಚಾಗಿದ್ದು, ಜಾರ್ಖಂಡ್ ಮಾಫಿಯಾ ಚಟುವಟಿಕೆಗಳಿಂದ ಬರಿದಾಗಿದೆ ಎಂದು ಆದಿತ್ಯನಾಥ ಆರೋಪಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಲ್ಯಾಂಡ್ ಜಿಹಾದ್ ಮತ್ತು ಲವ್ ಜಿಹಾದ್‌ನಲ್ಲಿ ತೊಡಗಿರುವ ನುಸುಳುಕೋರರಿಗೆ ಜೆಎಂಎಂ ನೇತೃತ್ವದ ಸರ್ಕಾರ ಬೆಂಬಲ ನೀಡುತ್ತಿದೆ. ಎನ್‌ಡಿಎ ಅಧಿಕಾರಕ್ಕೆ ಬಂದರೆ ಅಂತಹ ಶಕ್ತಿಗಳನ್ನು ಮಟ್ಟಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.
1947ರ ದೇಶ ವಿಭಜನೆಯ ಸಂದರ್ಭದಲ್ಲಿ ಒಗ್ಗಟ್ಟಾಗಿ ಇರದಿದ್ದರಿಂದ ಕನಿಷ್ಠ 10 ಲಕ್ಷ ಹಿಂದೂಗಳನ್ನು ಕಗ್ಗೊಲೆ ಮಾಡಲಾಗಿತ್ತು. ಹಿಂದೂಗಳು ಸುರಕ್ಷಿತವಾಗಿರಬೇಕಾದರೆ ಒಗ್ಗಟ್ಟಾಗಬೇಕೆಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.