ADVERTISEMENT

ಜಾರ್ಖಂಡ್‌ನ ಸಿಎಂ ಆಗಿ ಚಂಪೈ ಸೊರೇನ್ ಪ್ರಮಾಣ: ಬಹುಮತ ಸಾಬೀತಿಗೆ 10 ದಿನಗಳ ಅವಕಾಶ

ಪಿಟಿಐ
Published 2 ಫೆಬ್ರುವರಿ 2024, 9:19 IST
Last Updated 2 ಫೆಬ್ರುವರಿ 2024, 9:19 IST
   

ರಾಂಚಿ: ಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷದ (ಜೆಎಂಎಂ) ಚಂಪೈ ಸೊರೇನ್‌ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.

ಇಲ್ಲಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಚಂಪೈ ಅವರ ಜತೆ ಕಾಂಗ್ರೆಸ್‌ನ ಅಲಂಗಿರ್‌ ಆಲಂ ಹಾಗೂ ಆರ್‌ಜೆಡಿಯಯ ಸತ್ಯಾನಂದ್‌ ಭೋಕ್ತ ಅವರು ಸಚಿವರಾಗಿ ಶಪಥಗೈದರು.

ADVERTISEMENT

ರಾಜಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟದ ಹಿರಿಯ ನಾಯಕರು ಹಾಜರಿದ್ದರು. ಬುಡಕಟ್ಟು ಜನಾಂಗಕ್ಕೆ ಸೇರಿದ 67 ವರ್ಷದ ಚಂಪೈ ಅವರು ರಾಜ್ಯದ 12ನೇ ಮುಖ್ಯಮಂತ್ರಿ ಎನಿಸಿಕೊಂಡರು.

ಹಣ ಅಕ್ರಮ ವರ್ಗಾವಣೆ ಸಂಬಂಧ ಇ.ಡಿ ಇಕ್ಕಳದಲ್ಲಿ ಸಿಲುಕಿಕೊಂಡಿದ್ದ ಹೇಮಂತ್‌ ಸೊರೇನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಚಂಪೈ ಸೊರೇನ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು.

ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‘ಹೇಮಂತ್ ಸೊರೇನ್ ಅವರು ಜಾರಿಗೆ ತಂದಿದ್ದ ಕಲ್ಯಾಣ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವೆ. ಜಾರ್ಖಂಡ್‌ನ ಅಭಿವೃದ್ಧಿಗೆ ಬದ್ಧ. ಜಲ, ಅರಣ್ಯ ಹಾಗೂ ಭೂಮಿಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.

ಬಹುಮತ ಸಾಬೀತು ಪಡಿಸಲು ಚಂಪೈ ಸೊರೇನ್ ಅವರಿಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಜೇಶ್‌ ಠಾಕೂರ್ ಹೇಳಿದ್ದಾರೆ. ಅಲ್ಲದೆ ನಮ್ಮ ಮೈತ್ರಿ ಗಟ್ಟಿಯಾಗಿದೆ. ನಾವು ಒಗ್ಗಟ್ಟಾಗಿದ್ದು, ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.