ADVERTISEMENT

Jharkhand polls: ಶ್ರೀಮಂತ ಜನರ ಕಲ್ಯಾಣಕ್ಕೆ ಮಾತ್ರ ಬಿಜೆಪಿ ಕೆಲಸ: ಖರ್ಗೆ ಕಿಡಿ

ಪಿಟಿಐ
Published 5 ನವೆಂಬರ್ 2024, 9:52 IST
Last Updated 5 ನವೆಂಬರ್ 2024, 9:52 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

(ಪಿಟಿಐ ಚಿತ್ರ)

ರಾಂಚಿ: ಜಾರ್ಖಂಡ್‌ ಜನರ ಕಲ್ಯಾಣವನ್ನು ಖಾತ್ರಿಪಡಿಸುವ ಉದ್ದೇಶ ಬಿಜೆಪಿಗೆ ಇಲ್ಲ, ಬದಲಿಗೆ ರಾಜ್ಯದ ಕಲ್ಲಿದ್ದಲು, ಇತರ ಖನಿಜ ಸಂಪನ್ಮೂಲಗಳನ್ನು ‘ಲೂಟಿ‘ ಮಾಡುವ ಸಲುವಾಗಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.

ADVERTISEMENT

ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ಇಲ್ಲಿ ಬಿಜೆಪಿ ಅಭ್ಯರ್ಥಿಗಳಿಗಿಂತ ನಾಯಕರೇ ಹೆಚ್ಚಾಗಿದ್ದು, ಬುಡಕಟ್ಟು ಮುಖ್ಯಮಂತ್ರಿಯಿಂದ ಅಧಿಕಾರ ಕಸಿದುಕೊಳ್ಳಲು ಬಿಜೆಪಿ ಯತ್ನಿಸುತ್ತಿದ್ದು ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಜನರಲ್ಲಿ ಮನವಿ ಮಾಡಿದರು.

ಬಿಜೆಪಿ ಒಳನುಸುಳುವಿಕೆ ಬಗ್ಗೆ ಮಾತನಾಡುತ್ತದೆ ಆದರೆ ಕೇಂದ್ರದಲ್ಲಿ ಮತ್ತು ಅಸ್ಸಾಂನಲ್ಲಿ ಬಿಜೆಪಿ ಆಡಳಿತವಿದ್ದರೂ ಅಕ್ರಮ ವಲಸಿಗರ ವಿರುದ್ಧ ಏಕೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಖರ್ಗೆ ಪ್ರಶ್ನೆ ಮಾಡಿದರು. ನರೇಂದ್ರ ಮೋದಿ ಅವರು ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು, ಆದರೆ ಉದ್ಯೋಗ ಕೊಟ್ಟರೇ? ಎಂದು ಖರ್ಗೆ ಜನರನ್ನು ಕೇಳಿದರು. 

ಲೂಟಿ ಮಾಡುವವರ ಬಗ್ಗೆ ಎಚ್ಚರವಿರಲಿ ಎಂದ ಅವರು ಹೇಮಂತ್‌ ಸೋರೆನ್ ಜಾರ್ಖಂಡ್‌ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಖರ್ಗೆ ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ‘ಶ್ರೀಮಂತ ಜನರ ಕಲ್ಯಾಣ‘ಕ್ಕೆ ಕೆಲಸ ಮಾಡುತ್ತಿದೆ. ಆದ್ದರಿಂದಲೇ ಪ್ರಧಾನಿ ಮೋದಿ ಅವರು ಶ್ರೀಮಂತರ ₹ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಬಡವರು, ರೈತರು ಮತ್ತು ದಲಿತರಿಗೆ ಯಾವುದೇ ಪರಿಹಾರ ನೀಡಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿರುವುದು ಸರಿಯಾಗಿದೆ ಎಂದು ಖರ್ಗೆ ತಿಳಿಸಿದರು.

ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರದಲ್ಲಿರಲು ಯಾವುದೇ ಹಕ್ಕಿಲ್ಲ ಎಂದು ಹೇಳಿದ ಅವರು, ರಾಜ್ಯದ ಜನರ ಕಲ್ಯಾಣಕ್ಕಾಗಿ ₹ 1.36 ಲಕ್ಷ ಕೋಟಿ ಕಲ್ಲಿದ್ದಲು ಬಾಕಿಯನ್ನು ತಕ್ಷಣ ತೆರವುಗೊಳಿಸಬೇಕೆಂದು ಒತ್ತಾಯಿಸಿದರು.

81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 13 ಮತ್ತು 20ರಂದು ಚುನಾವಣೆ ನಡೆಯಲಿದ್ದು, ಮತ ಎಣಿಕೆ ನವೆಂಬರ್ 23ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.