ದೇವಘರ್: ಜಾರ್ಖಂಡ್‌ನ ದೇವಘರ್ ಜಿಲ್ಲೆಯ ಬಾಬಾ ವೈದ್ಯನಾಥ ದೇಗುಲ ಬಳಿಯ ತ್ರಿಕೂಟ ಪರ್ವತ ಪ್ರದೇಶದಲ್ಲಿ ರೋಪ್‌ವೇ ದುರಂತ ಸಂಭವಿಸಿ 40 ಗಂಟೆಗಳು ಕಳೆದರೂ ಐದು ಮಂದಿ ಇನ್ನೂ ಕೇಬಲ್ ಕಾರ್‌ನಲ್ಲಿ ಉಳಿದಿರುವುದು ತಿಳಿದುಬಂದಿದೆ.
ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ಮಂಗಳವಾರ ಬೆಳಿಗ್ಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು ಕೇಬಲ್ ಕಾರುಗಳಲ್ಲಿ ಸಿಲುಕಿದ್ದ 15 ಮಂದಿಯ ಪೈಕಿ 10 ಮಂದಿಯನ್ನು ರಕ್ಷಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈವರೆಗೆ 50 ಮಂದಿ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಭಾನುವಾರ ಸಂಜೆ 4.30ರ ವೇಳೆಗೆ 12 ರೋಪ್‌ವೇ ಕೇಬಲ್ ಕಾರುಗಳು ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಕೇಬಲ್ ಕಾರುಗಳಲ್ಲಿ 50ಕ್ಕೂ ಹೆಚ್ಚು ಮಂದಿ ಸಿಲುಕಿದ್ದರು ಎನ್ನಲಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ತಂಡ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದವು.
ಗಾಯಗೊಂಡಿದ್ದ ಒಬ್ಬ ವ್ಯಕ್ತಿ ಭಾನುವಾರ ರಾತ್ರಿ ಮೃತಪಟ್ಟಿದ್ದರೆ, ಮತ್ತೊಬ್ಬರು ಸೋಮವಾರ ರಕ್ಷಣಾ ಕಾರ್ಯಾಚರಣೆ ವೇಳೆ ಹೆಲಿಕಾಪ್ಟರ್ ಏರುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಸಾವಿಗೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.