ನವದೆಹಲಿ: ಜಾರ್ಖಂಡ್‌ನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಪಕ್ಷಗಳ ಶಾಸಕರು ಮಂಗಳವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಈ ಮೂಲಕ ಸಿಎಂ ಸೊರೇನ್ ವಿರುದ್ಧದ ಜಾರಿ ನಿರ್ದೇಶನಾಲಯದ (ಇ.ಡಿ) ಪ್ರಕರಣದಲ್ಲಿ ಮೈತ್ರಿ ಸರ್ಕಾರದ ಶಾಸಕರು ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ ಹೆಸರುಗಳನ್ನು ಉಲ್ಲೇಖಿಸದೇ ಸೊರೇನ್‌ಗೆ ಬೆಂಬಲ ಸೂಚಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಇ.ಡಿ ವಿಚಾರಣೆ ಹಿನ್ನೆಲೆಯಲ್ಲಿ ಪತ್ನಿ ಕಲ್ಪನಾ ಸೂರೇನ್‌ಗೆ ಅಧಿಕಾರ ಹಸ್ತಾಂತರದ ಸಾಧ್ಯತೆಯ ಕುರಿತು ವರದಿಯಾಗಿದೆ. ಆದರೆ ಈ ಕುರಿತು ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಶಾಸಕರೊಬ್ಬರು ತಿಳಿಸಿದ್ದಾರೆ.
ಎರಡು ಸುತ್ತಿನ ಸಭೆ ನಡೆಯಿತು. ಮುಖ್ಯಮಂತ್ರಿ ಅವರ ಪತ್ನಿ ಕಲ್ಪನಾ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು. ನಾವೆಲ್ಲ ಒಗ್ಗಟ್ಟನ್ನು ಪ್ರದರ್ಶಿಸಿದ್ದೇವೆ ಎಂದು ಮತ್ತೊಬ್ಬ ಶಾಸಕರು ತಿಳಿಸಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಕೂಟದ ಭಾಗವಾಗಿವೆ.
ಜಮೀನು ಅಕ್ರಮ ವಹಿವಾಟು ಹಗರಣ ಕುರಿತ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಇ.ಡಿ. ಅಧಿಕಾರಿಗಳು ಸೋಮವಾರ ಸೊರೇನ್ ಅವರ ದೆಹಲಿ ನಿವಾಸದಲ್ಲಿ ಶೋಧ ನಡೆಸಿದ್ದರು. ಆದರೆ, ಶೋಧ ನಡೆದ ಅವಧಿಯಲ್ಲಿ ಸೊರೇನ್ ಇರಲಿಲ್ಲ. ಇ.ಡಿ. ಅಧಿಕಾರಿಗಳು 36 ಲಕ್ಷ ರೂಪಾಯಿ ನಗದು, ಬಿಎಂಡಬ್ಲ್ಯೂ ಎಸ್‌ಯುವಿ ಕಾರು ಮತ್ತು ಅಕ್ರಮಕ್ಕೆ ‘ಪೂರಕವಾಗಿರುವ’ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.
ಮಂಗಳವಾರ ರಾಂಚಿಯಲ್ಲಿನ ತಮ್ಮ ಅಧಿಕೃತ ನಿವಾಸವನ್ನು ತಲುಪಿರುವ ಅವರು ಆಡಳಿತರೂಢ ಮೈತ್ರಿಪಕ್ಷಗಳ ಶಾಸಕರ ಸಭೆ ನಡೆಸಿದರು. ಅಲ್ಲದೆ, ಇ.ಡಿ ಅಧಿಕಾರಿಗಳಿಗೆ ಇ–ಮೇಲ್ ಕಳುಹಿಸಿದ್ದು, ಇಂದು (ಜ. 31) ಮಧ್ಯಾಹ್ನ 1 ಗಂಟೆಗೆ ತಮ್ಮ ಕಚೇರಿಯಲ್ಲೇ ವಿಚಾರಣೆ ಎದುರಿಸುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.